

ಬೀದರ್: ವಾಹನಗಳಿಗೆ ಕಡ್ಡಾಯವಾಗಿ ಆರು ತಿಂಗಳಿಗೆ ಒಮ್ಮೆ ವಾಯುಮಾಲಿನ್ಯ ತಪಾಸಣೆ ಮಾಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಶಿವಶಂಕರ ಹೇಳಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಪಾಸಣೆ ಮಾಡದಿದ್ದಲ್ಲಿ ದ್ವಿಚಕ್ರ ವಾಹನಗಳಿಗೆ 1500 ರೂ. ಮತ್ತು ನಾಲ್ಕು ಚಕ್ರದ ವಾಹನಗಳಿಗೆ 3000 ರೂ. ದಂಡ ವಿಧಿಸಲಾಗುತ್ತದೆ. ಪರಿಸರ ಸಮತೋಲನದಿಂದ ಇಟ್ಟುಕೊಳ್ಳಬೇಕು. ಮಾಲಿನ್ಯ ನಿಯಂತ್ರಣಕ್ಕೆ ಒತ್ತು ಕೊಡಬೇಕು. ವಾಹನಗಳಿಗೆ ಕಳಪೆ ಇಂಧನ ಬಳಸಬಾರದು. ಇದರಿಂದ ಸಾಕಷ್ಟು ಹೊಗೆ ಉಂಟಾಗಿ ಪರಿಸರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದರು.
ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಎಂ.ಡಿ. ಜಾಫರ್ ಸಾಧಿಕ್ ಮಾತನಾಡಿ, ಒಂದು ಹೊತ್ತಿನ ಊಟ ಇರದಿದ್ದರೆ ಮನುಷ್ಯ ಬದುಕಬಹುದು. ಆದರೆ ಗಾಳಿ ಬಹಳ ಮುಖ್ಯ. ಹೀಗಾಗಿ ಕಾಲಕಾಲಕ್ಕೆ ವಾಹನಗಳನ್ನು ಪರಿಶೀಲಿಸಿ ಹೊಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಬೀದಿನಾಟಕ ಹಾಗೂ ಸಸಿ ವಿತರಣೆ ನಡೆಯಿತು. ತಮಟೆ ಬಾರಿಸುವ ಮೂಲಕ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾಹನ ಚಾಲಕರಿಗೆ ಸಸಿ ವಿತರಿಸಿದರು. ಕಚೇರಿ ಅಧೀಕ್ಷಕ ಖಾಜಾ ಬಿರಾನಿಬಾಷಾ, ಮೋಟಾರು ವಾಹನ ನಿರೀಕ್ಷಕ ಮಂಜುನಾಥ ಎಂ., ಶಿವರಾಜ ಜಮಾದಾರ, ಪ್ರಕಾಶ ಗುಮ್ಮೆ, ಸಮೀರ್ ಅಹ್ಮದ್, ಅನೀಲಕುಮಾರ, ರಾಜಕುಮಾರ ಬಿರಾದಾರ, ವಿಲಿಯಂ ಹೊಸಮನಿ, ಜೇಮ್ಸ್, ವಿಶ್ವನಾಥ ಎಂ., ಸೈಯದ್ ಖಲೀಂ, ವೀರೇಂದ್ರ ಇತರರಿದ್ದರು.
ನಂದೀಶ್ವರ ನಾಟ್ಯ ಸಂಘ ಚಿಮಕೋಡ ತಂಡದ ಅಧ್ಯಕ್ಷ ದೇವದಾಸ ಚಿಮಕೋಡ ನೇತೃತ್ವದ ಬೀದಿನಾಟಕ ಕಲಾ ತಂಡದಿಂದ ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ಆರ್.ಟಿ.ಒ ಕಚೇರಿ ಹತ್ತಿರ ಜನಜಾಗೃತಿ ಮೂಡಿಸಲಾಯಿತು.