

ಶಿರಸಿ: ಬಿಸಿಲಿಗೆ ಸುಡುತ್ತಿದ್ದ ನಗರ ಹಾಗೂ ಗ್ರಾಮೀಣ ಭಾಗದ ವಾತಾವರಣ ಶುಕ್ರವಾರ ಬಿದ್ದ ಮಳೆಗೆ ತಂಪಾಯಿತು. ಗಂಟೆಗೂ ಅಧಿಕ ಕಾಲ ನಗರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಗುಡುಗá-- ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಚಿಕ್ಕ ಗಾತ್ರದ ಆಲಿಕಲ್ಲು ಬಿದ್ದ ಕಾರಣ ವಾತಾವರಣಲ್ಲಿ ಶೀತ ಉಂಟಾಯಿತು. ಸಿಡಿಲಿಗೆ ನಗರದ ಜಯನಗರದ ಕೆಲ ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಅಗತ್ಯ ಕಾರ್ಯಕ್ಕೆ ನಗರಕ್ಕೆ ಬಂದಿದ್ದ ಕೆಲ ಜನರು ತೊಂದರೆ ಅನುಭವಿಸಿದರು.
ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ: ಚಿಪಗಿ ಬಳಿ ವಿದ್ಯುತ್ ಕಂಬವೊಂದು ಮುರಿದು ರಸ್ತೆಯ ಮೇಲೆ ಬಿದ್ದ ಪರಿಣಾಮ ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಸ್ಥಳೀಯರು, ಹೆಸ್ಕಾಂ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ರಸ್ತೆಯ ಮೇಲೆ ಬಿದ್ದ ಕಂಬ ತೆರವುಗೊಳಿಸಿದರು.
ಜೊಯಿಡಾ ವರದಿ: ತಾಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಗಾಳಿ, ಗುಡುಗು, ಸಿಡಿಲಿನ ಸಮೇತ ಮಳೆಯಾಗಿದೆ. ಇದರಿಂದ ರಸ್ತೆಗಳ ಮೇಲೆ ಮರ ಮುರಿದು ಬಿದ್ದು ಹಾನಿಯಾಗಿದೆ. ತಾಲೂಕಿನ ಕುಂಬಾರವಾಡ ಸಮೀಪ ರಸ್ತೆ ಹಾಗೂ ವಿದ್ಯುತ್ ಕಂಬದ ಮೇಲೆ ಮರ ಮುರಿದು ಬಿದ್ದು ಹಾನಿಯಾಗಿತ್ತು. ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಕ್ಷಣ ತೆರವು ಮಾಡಿದ್ದಾರೆ.