

ಚನ್ನರಾಯಪಟ್ಟಣ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಪಕ್ಕದಲ್ಲಿ ಎಸ್ಕಲೇಟರ್ ಸೌಲಭ್ಯವುಳ್ಳ ಉನ್ನತ ತಂತ್ರಜ್ಞಾನದ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಪುರಸಭೆಯಿಂದ ಐದು ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಹಳೇ ನ್ಯಾಯಾಲಯವಿದ್ದ ಸ್ಥಳದಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನವಸತಿ ಪ್ರದೇಶ ವಿಸ್ತಾರವಾಗಿ ಬೆಳೆಯುತ್ತಿದ್ದು, ನಗರಸಭೆಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ನಾಗರಿಕರು ಹಾಗೂ ಪುರಸಭೆ ಅಧಿಕಾರಿ, ನೌಕರರು ಸುಗಮವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನೆಲಹಂತಸ್ತು ಹಾಗೂ ಮೊದಲನೇ ಮಹಡಿ ನಿರ್ಮಾಣ ಮಾಡಿ 2023-24ನೇ ಆರ್ಥಿಕ ವರ್ಷದಲ್ಲಿ ಎರಡನೇ ಹಂತದಲ್ಲಿ 3 ಕೋಟಿ ರೂ. ಹೆಚ್ಚಿನ ಅನುದಾನಕ್ಕೆ ವ್ಯವಸ್ಥೆ ಮಾಡಿ ಎರಡು ಮತ್ತು ಮೂರನೇ ಮಹಡಿಯನ್ನು ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಪಟ್ಟಣದಾದ್ಯಂತ 6.5 ಕೋಟಿ ರೂ. ನಗರೋತ್ಥಾನ ಯೋಜನೆಯ ಅನುದಾನ ಹಾಗೂ ಪುರಸಭೆಯ ತೆರಿಗೆ ಸಂಗ್ರಹದ 5 ಕೋಟಿ ಹಣದಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಿದ್ದು ಜನವಸತಿ ಪ್ರದೇಶ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ದಿಕ್ಕುಗಳಲ್ಲೂ ವಿಸ್ತಾರವಾಗಿ ಬೆಳೆಯುತ್ತಿದ್ದು, ಉತ್ತಮವಾದ ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡುವ ಉದ್ದೇಶದಿಂದ ಯೋಜನೆ ತಯಾರಿಸಲು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪುರಸಭೆಯಿಂದ 10 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.
ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಉಪಾಧ್ಯಕ್ಷೆ ಲಕ್ಮೀ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಎಚ್.ಎನ್. ನವೀನ್, ಜಿ.ಆರ್. ಸುರೇಶ್, ರಾಧಾ ಮಂಜುನಾಥ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಪುರಸಭೆ ಮುಖ್ಯಾಧಿಕಾರಿ ಕೆ.ಎನ್. ಹೇಮಂತ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಡಿ.ವಿ. ಲವಕುಮಾರ್, ಮುಖಂಡರಾದ ಕಿರಣ್, ಅನಿಲ್ ಮರಗೂರು ಇತರರಿದ್ದರು.