ವಾಣಿಜ್ಯ ಸಂಕೀರ್ಣ, ಯಾವಾಗ ಪೂರ್ಣ?

28Jaggu2
ಬೆಳಗಾವಿ ಎಪಿಎಂಸಿ ರಸ್ತೆಯ ನೆಹರುನಗರ 3ನೇ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಪಾಲಿಕೆಯ ವಾಣಿಜ್ಯ ಸಂಕಿರ್ಣದ ಕಟ್ಟಡ.
Published on

ಬೆಳಗಾವಿ: ಇಲ್ಲಿಯ ಎಪಿಎಂಸಿ ರಸ್ತೆ ಮಾರ್ಗದ ನೆಹರುನಗರ 3ನೇ ಕ್ರಾಸ್ ಬಳಿ ಮಹಾನಗರ ಪಾಲಿಕೆಯಿಂದ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ.

ಕಟ್ಟಡ ಕಾಮಗಾರಿಗಾಗಿ ಇದುವರೆಗೆ 7.3 ಕೋಟಿ ರೂ. ವೆಚ್ಚ ಮಾಡಲಾಗಿದೆಯಾದರೂ ಕಟ್ಟಡ ಪೂರ್ಣಗೊಳ್ಳದೆ ಭೂತ ಬಂಗಲೆಯಂತೆ ಗೋಚರಿಸುತ್ತಿದೆ. ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಈ ಬೃಹತ್ ವಾಣಿಜ್ಯ ಮಳಿಗೆ ನಿರ್ಮಾಣ ಅರ್ಧಕ್ಕೇ ಸ್ಥಗಿತಗೊಂಡಿದ್ದು, ಕಾಮಗಾರಿ ಮುಗಿಯುವುದು ಯಾವಾಗ ಎಂಬ ಪ್ರಶ್ನೆ ಹುಟ್ಟಿದೆ.

ಕಟ್ಟಡದ ಸುತ್ತ-ಮುತ್ತ ಕಸ: ಅರೆಬರೆಯಾಗಿ ನಿರ್ಮಾಣಗೊಂಡ ಕಟ್ಟಡದೊಳಗೆ ಗಿಡ-ಗಂಟಿಗಳು ಬೆಳೆದಿವೆ. ಕಳ್ಳ-ಕಾಕರ ತಾಣವಾಗಿ ಮಾರ್ಪಟ್ಟಿದೆ. ರಾತ್ರಿ ವೇಳೆ ಈ ಕಟ್ಟಡ ಕುಡುಕರ ತಾಣವಾಗಿ ಮಾರ್ಪಡುತ್ತಿದೆ. ಬೀದಿ ಬದಿಯ ಸಣ್ಣ-ಪುಟ್ಟ ವ್ಯಾಪಾರಿಗಳು ಕಸ ತಂದು ಕಟ್ಟಡದ ಅಕ್ಕ-ಪಕ್ಕ ಎಸೆಯುತ್ತಿದ್ದಾರೆ. ಕೆಲವರು ಕಟ್ಟಡವನ್ನೇ ವಾಸ ಸ್ಥಾನವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬಹು ಉದ್ದೇಶಿತ ಕಟ್ಟಡ ದುರ್ಬಳಕೆಯಾಗುತ್ತಿದೆ. ಕಾಮಗಾರಿ ಪುರ್ಣಗೊಳಿಸಿ ಅಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡಿದರೆ ಪಾಲಿಕೆಗೆ ತಿಂಗಳಿಗೆ ಲಕ್ಷಾಂತರ ರೂ. ವರಮಾನ ಬರಲಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದು ಉತ್ತಮ ಯೋಜನೆ ನನೆಗುದಿಗೆ ಬಿದ್ದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಜನರು ಆರೋಪಿಸಿದ್ದಾರೆ.

ಇನ್ನೂ ಬೇಕು ಸಮಯ, ಹಣ: ಸಂಕೀರ್ಣದ ಬಾಕಿ ಹಂತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಅದು ರದ್ದಾಗಿದೆ. ಈಗ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ. ಕಟ್ಟಡ ಪೂರ್ಣಗೊಳ್ಳುವುದಕ್ಕೆ ಅಂದಾಜು ಇನ್ನೂ ಮೂರು ಕೋಟಿ ರೂ. ಅಗತ್ಯವಿದೆ. ಮುಂದಿನ ಆರು ತಿಂಗಳಲ್ಲಿ ನೆಲಮಹಡಿ ಸಂಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

160 ಮಳಿಗೆ, 3 ಶೋ ರೂಂ

ಸಂಕೀರ್ಣದ ಮೊದಲ ಮತ್ತು ಎರಡನೇ ಮಹಡಿಯಲ್ಲಿ 160 ಮಳಿಗೆ ನಿರ್ಮಿಸಲಾಗಿದೆ. ಕಟ್ಟಡದ ನೆಲ ಮಹಡಿ, ಮೊದಲ ಮಹಡಿ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿರುವ ಮಳಿಗೆಗಳಲ್ಲಿ ಮುಕ್ಕಾಲು ಭಾಗದಷ್ಟು ಅಂಗಡಿಗಳಿಗೆ ಇನ್ನೂ ಶಟರ್ಸ್ ಅಳವಡಿಕೆ ಬಾಕಿ ಇದೆ. ಅಲ್ಲದೆ, ಇಲೆಕ್ಟ್ರಿಕಲ್ ವೈರಿಂಗ್ ಸೇರಿ ಅಂತಿಮ ಹಂತದ ಕಾಮಗಾರಿ ಇನ್ನೂ ಬಾಕಿ ಇವೆ. ನೆಲಮಹಡಿಯ ಬಲ ಭಾಗದಲ್ಲಿ 2-3 ಶೋ ರೂಂ ನಿರ್ಮಿಸುವ ಯೋಜನೆ ಇದೆ. ಒಟ್ಟಾರೆ ಕಾಮಗಾರಿಯು ಮೂರು ಹಂತಗಳಲ್ಲಿ ನಡೆಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ವರ್ಷಗಳೇ ಉರುಳಿದರೂ 3ನೇ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ. ಈ ವಿಚಾರವಾಗಿ ಪಾಲಿಕೆ ಅಧಿಕಾರಿಗಳೂ ಆಸಕ್ತಿ ತೋರಿಸುತ್ತಿಲ್ಲ.

ಕಟ್ಟಡ ಕಾಮಗಾರಿ ಮೂರು ಹಂತದಲ್ಲಿ ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಅಂತಿಮ ಹಂತದ ಕಾಮಗಾರಿಗಾಗಿ ಟೆಂಡರ್ ಕರೆದಿದ್ದೇವೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ, ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ಮಳಿಗೆಗಳನ್ನು ಬಾಡಿಗೆಗೆ ನೀಡಲು ಕ್ರಮ ಕೈಗೊಳ್ಳುತ್ತೇವೆ.| ಲಕ್ಷ್ಮೀ ನಿಪ್ಪಾಣಿಕರ, ಮಹಾನಗರ ಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ)ವಾಣಿಜ್ಯ ಸಂಕೀರ್ಣವು 100 ್ಡ 40 ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ. ಎರಡನೇ ಮಹಡಿಯ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಬಿಡುಗಡೆಯಾದ ಅನುದಾನ ಸಾಕಾಗುವುದಿಲ್ಲ. ಬಾಕಿ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರಿಗೆ ತಿಳಿಸಲಾಗಿದೆ. ಆದಷ್ಟು ಶೀಘ್ರ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು.| ಸಚಿನ ಕಾಂಬಳೆ ಎಇಇ ಪಾಲಿಕೆ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net