ವಾಣಿಜ್ಯ ನಗರಿಗೆ ಬಸ್ ಶೆಲ್ಟರ್ ಗಗನಕುಸುಮ

GJD STORY
Published on

ಶಿವಕುಮಾರ ಶಶಿಮಠ ಗಜೇಂದ್ರಗಡ

ಪಟ್ಟಣದ ಪ್ರಯಾಣಿಕರು ಬೇರೆ ಉರಿಗೆ ತೆರಳಲು ಕೇಂದ್ರ ಬಸ್ ನಿಲ್ದಾಣಕ್ಕಿಂತಲೂ ಕಾಲಕಾಲೇಶ್ವರ ವೃತ್ತವನ್ನು ಹೆಚ್ಚಾಗಿ ಆಶ್ರಯಿಸಿದ್ದಾರೆ. ಆದರೆ, ಇಲ್ಲಿ ಯಾವುದೇ ಬಸ್ ಶೆಲ್ಟರ್ ಇಲ್ಲ. ಮಳೆ-ಬಿಸಿಲು- ಧೂಳು ಸಹಿಸಿಕೊಂಡು ಬಸ್‌ಗಾಗಿ ಕಾಯಬೇಕಾಗಿದೆ.

ಕಾಲಕಾಲೇಶ್ವರ ವೃತ್ತದಲ್ಲಿ ಕುಷ್ಟಗಿ, ಯಲಬುರ್ಗಾ, ಇಳಕಲ್ಲ ಮಾರ್ಗದಲ್ಲಿ ಸಾಗುವ ಬಸ್‌ಗಳನ್ನು ನಿಲುಗಡೆ ಮಾಡುತ್ತಾರೆ. ಈ ವೃತ್ತದ ಇನ್ನೊಂದು ಕಡೆ ರೋಣ, ಬಾದಾಮಿ, ಬಾಗಲಕೋಟೆಯತ್ತ ಸಾಗುವ ಬಸ್‌ಗಳು ನಿಲ್ಲುತ್ತವೆ. ಈ ವೃತ್ತದಲ್ಲಿ ನಿತ್ಯ ನೂರಕ್ಕೂ ಅಧಿಕ ಬಸ್‌ಗಳು ಸಂಚಾರ ಮಾಡುತ್ತವೆ. ಸಾವಿರಾರು ಮಂದಿ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಆದರೆ ಇಲ್ಲಿ ಬಸ್ ನಿಲ್ಲಿಸುವುದರಿಂದ ಉಳಿದ ವಾಹನಗಳಿಗೆ ತೊಂದರೆಯಾಗುತ್ತಿದೆ. ಈದ್ಗಾ ಮೈದಾನ ಮುಂದೆ ಕಿರು ಬಸ್ ನಿಲ್ದಾಣ ನಿರ್ಮಿಸಿದರೆ ಸಂಚಾರ ಕಿರಿಕಿರಿ ತಪ್ಪುತ್ತದೆ ಎಂಬುದು ಸಾರ್ವಜನಿಕರ ಆಗ್ರಹ.

ಅಂಗಡಿಕಾರರಿಂದ ನಿಂದನೆ: ಕಾಲಕಾಲೇಶ್ವರ ವೃತ್ತದಲ್ಲಿ ಪ್ರಯಾಣಿಕರು ಸುತ್ತಲಿನ ಅಂಗಡಿಗಳ ಮುಂದೆಯೇ ತಮ್ಮ ಬ್ಯಾಗುಗಳನ್ನು ಇಟ್ಟುಕೊಂಡು ಬಸ್‌ಗಾಗಿ ಕಾಯುವುದರಿಂದ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ. ಆಗ ಪ್ರಯಾಣಿಕರು ನಿಂದನೆ ಎದುರಿಸುವುದು ಸಾಮಾನ್ಯವಾಗಿದೆ. ಪಟ್ಟಣದ ಪುರ್ತಗೇರಿ ಕ್ರಾಸ್‌ನಲ್ಲಿದ್ದ ಬಸ್ ತಂಗುದಾಣವನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ತೆರವು ಮಾಡಲಾಗಿತ್ತು. ಇಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದು ಹಾಗೂ ದಕ್ಷಿಣಕಾಶಿ ಕಾಲಕಾಲೇಶ್ವರಕ್ಕೆ ತೆರಳಲು ಇದು ಪ್ರಮುಖ ವೃತ್ತವಾಗಿದೆ. ಸಾವಿರಾರು ವಿದ್ಯಾರ್ಥಿಗಳು, ಭಕ್ತರು ಬಯಲಿನಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೂ ಬಸ್ ತಂಗುದಾಣ ಪುನರ್ ನಿರ್ಮಾಣವಾಗಿಲ್ಲ. ಕೆಲವರು ಈ ಜಾಗದಲ್ಲಿ ಹೋಟೆಲ್ ಆರಂಭಿಸಿ ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ. ಈ ವಿಷಯವಾಗಿ ಪಿಡಿಒಗೆ ಕೇಳಿದರೆ ಹೋಟೆಲ್ ಮಾಲೀಕನಿಗೆ ಹಲವಾರು ಬಾರಿ ನೋಟಿಸ್ ನೀಡಿದ್ದೇವೆ ಎಂಬ ಉತ್ತರ ಬರುತ್ತದೆಯೇ ಹೊರತು ಪರಿಹಾರ ಕ್ರಮ ಕೈಗೊಂಡಿಲ್ಲ.

ಇನ್ನು ಯಲಬುರ್ಗಾ ರಸ್ತೆಯಲ್ಲಿರುವ ರಾಣಿಚನ್ನಮ್ಮ ವೃತ್ತದಲ್ಲೂ ಇದೇ ಕಥೆ. ಅಲ್ಲಿ ಬಸ್ ನಿಲುಗಡೆಗೆ ಅವಕಾಶವಿದ್ದು, ನೂರಾರು ವಿದ್ಯಾರ್ಥಿಗಳು ನಿತ್ಯವೂ ಕಾಯುತ್ತಿರುತ್ತಾರೆ. ತಂಗುದಾಣ ನಿರ್ಮಿಸಬೇಕು ಎಂಬ ಆಗ್ರಹ ವಿದ್ಯಾರ್ಥಿಗಳದ್ದು. ತಾಲೂಕಿನ ರುದ್ರಾಪುರ, ಶಾಂತಗೇರಿ, ಬೊಮ್ಮಸಾಗರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ತಂಗುದಾಣ ತೆರವು ಮಾಡಿದ್ದಾರೆ. ಆದರೆ ಪುನರ್ ನಿರ್ಮಾಣ ಮಾಡಿಲ್ಲ.

ಹೆದ್ದಾರಿ ಕಾಮಗಾರಿಗಾಗಿ ಆಹುತಿ

ತಾಲೂಕಿನ ಮುಶಿಗೇರಿ ವಾಣಿಜ್ಯವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಯೂ ಹೆಚ್ಚಾಗಿದೆ. ಇಲ್ಲಿನ ಕಿರು ಬಸ್ ನಿಲ್ದಾಣ ಗೂಡಂಗಡಿಗಳಿಂದ ಮುಚ್ಚಿ ಹೋಗಿತ್ತು. ನಿಲ್ದಾಣದ ಒಳಗೆ ಬಸ್‌ಗಳು ಬರುತ್ತಿದ್ದಿಲ್ಲ. ಈಗ ರಾಷ್ಟ್ರೀಯ ನಿರ್ಮಾಣಕ್ಕಾಗಿ ಗೂಡಂಗಡಿಗಳನ್ನು ತೆರವು ಮಾಡಲಾಗಿದೆ. ಹೊರಗಿದ್ದ ಅಂಗಡಿಗಳನ್ನು ತಂದು ಬಸ್ ನಿಲ್ದಾಣದಲ್ಲಿಯೇ ಇಡಲಾಗಿದೆೆ. ಇದರಿಂದ ಪ್ರಯಾಣಿಕರು ರಸ್ತೆಯ ತುದಿಯಲ್ಲಿ ಬಸ್‌ಗಾಗಿ ಕಾದು ಪ್ರಯಾಣಿಸುತ್ತಿದ್ದಾರೆ. ಗ್ರಾಮಸ್ಥರು 2 ವರ್ಷಗಳಿಂದ ಗಜೇಂದ್ರಗಡದ ಘಟಕದ ವ್ಯವಸ್ಥಾಪಕರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

ತಂಗುದಾಣವೇ ಇಲ್ಲದ ಊರು ತಾಲೂಕಿನ ರಾಂಪೂರ ಗ್ರಾಮ ದಶಕಗಳಿಂದ ಬಸ್ ನಿಲ್ದಾಣ ಸೌಲಭ್ಯದಿಂದ ವಂಚಿತವಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಇಲಾಖೆ ಮುಂದಾಗಿಲ್ಲ. ಸ್ಥಳೀಯ ಆಡಳಿತವೂ ತಲೆಕೆಡಿಸಿಕೊಂಡಿಲ್ಲ. ನಿತ್ಯವೂ ಸಾರ್ವಜನಿಕರು ಪರದಾಡುವುದು ಮಾತ್ರ ನಿಂತಿಲ್ಲ.

ಕಾಲಕಾಲೇಶ್ವರ ವೃತ್ತದಲ್ಲಿ ಬಸ್ ನಿಲುಗಡೆಯಿಂದ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಪ್ರಯಾಣಿಕರು ಬಿಸಿಲಿನಲ್ಲಿ ಕಾಯಬೇಕಾಗಿದೆ. ಪ್ರಯಾಣಿಕರಿಂದ ವ್ಯಾಪಾರಿಗಳಿಗೂ ಕಿರಿಕಿರಿಯಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದು ಕಿರು ಬಸ್ ನಿಲ್ದಾಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸೋಮನಗೌಡ ಗೌಡ್ರ, ಪಿಎಸ್‌ಐ ಗಜೇಂದ್ರಗಡ. ಪುರ್ತಗೇರಿ ತಂಗುದಾಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ತಾಲೂಕಿನಲ್ಲಿ ನಿಡಗುಂದಿ, ಸೂಡಿ, ಗಜೇಂದ್ರಗಡ ಈ ಮೂರು ನಿಲ್ದಾಣಗಳು ಮಾತ್ರ ಸಂಬಂಧಿಸಿವೆ. ಕಾಲಕಾಲೇಶ್ವರ ವೃತ್ತದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಸಾರ್ವಜನಿಕರು ಮನವಿ ನೀಡಿದರೆ ಮೇಲಧಿಕಾರಿಗಳ ಗಮನಕ್ಕೆ ತಂದು, ಶೆಲ್ಟರ್ ನಿರ್ಮಿಸುವ ಕಾರ್ಯಮಾಡುತ್ತೇವೆ. ರಾಘವೇಂದ್ರ ಬುದಾರಪುರ. ಸಾರಿಗೆ ಘಟಕದ ವ್ಯವಸ್ಥಾಪಕ ಗಜೇಂದ್ರಗಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net