

ಹುಬ್ಬಳ್ಳಿ: ಕಂಕಣ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯಲ್ಲಿ ಭಾನುವಾರ ಅಘೊಷಿತ ಬಂದ್ ವಾತಾವರಣ ನಿರ್ವಣವಾಗಿತ್ತು. ಲಾಕ್ಡೌನ್ ಸಡಿಲಿಕೆ ಬಳಿಕ ಸಹಜ ಸ್ಥಿತಿಗೆ ಮರಳಿದ್ದ ಜನ ಸಂಚಾರ ಗ್ರಹಣದ ವೇಳೆ ಅತಿ ವಿರಳವಾಗಿತ್ತು.
ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ದುರ್ಗದ ಬೈಲ್, ಜನತಾ ಬಜಾರ್, ದಾಜಿಬಾನಪೇಟ, ಷಹಾ ಬಜಾರ್, ಸಿಬಿಟಿ ಸೇರಿ ನಗರದೆಲ್ಲೆಡೆ ಬಹುತೇಕ ಮಳಿಗೆಗಳು, ಕೆಲ ಹೋಟೆಲ್ಗಳು ಬಂದ್ ಆಗಿದ್ದವು. ಜನರಿಲ್ಲದೆ ಮಾರುಕಟ್ಟೆಗಳು ಭಣಗುಡುತ್ತಿದ್ದವು.
ಚನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಗೋಕುಲ ರಸ್ತೆ, ತೋಳನಕೆರೆ ಟೆಂಡರ್ ಶ್ಯೂರ್ ರಸ್ತೆ, ವಿದ್ಯಾನಗರ ಸೇರಿ ವಿವಿಧೆಡೆ ವಾಹನಗಳ ಸಂಚಾರ ವಿರಳವಾಗಿತ್ತು. ಮಧ್ಯಾಹ್ನ ಸೂರ್ಯ ಗ್ರಹಣ ಮೋಕ್ಷವಾಗುತ್ತಿದ್ದಂತೆ ವಾಣಿಜ್ಯ ನಗರಿ ಚಟುವಟಿಕೆಗಳು ಗರಿಗೆದರಿದವು. ಜನಜೀವನ ಎಂದಿನಂತೆ ಸುಗಮವಾಯಿತು. ಮಣ್ಣೆತ್ತಿನ ಅಮಾವಾಸ್ಯೆ ಜತೆಗೆ ಸೂರ್ಯ ಗ್ರಹಣ ಇದ್ದ ಕಾರಣ ಸಾರ್ವಜನಿಕರು ಗ್ರಹಣದ ಬಳಿಕ ವಾಹನ ಪೂಜೆ, ದೇವರ ಪೂಜೆ ಮಾಡಿ ಭಕ್ತಿ ಮೆರೆದರು.
ಹೋಮ, ಹವನ, ವಿಶೇಷ ಪೂಜೆ: ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ನಗರದ ಹಲವು ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಗ್ರಹಣ ಮೋಕ್ಷಗೊಂಡ ಬಳಿಕ ಮಧ್ಯಾಹ್ನ 2 ಗಂಟೆ ನಂತರ ದೇವಸ್ಥಾನಗಳ ಶುದ್ಧಿ ಕಾರ್ಯ ನಡೆಯಿತು. ಇಲ್ಲಿನ ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನ, ದಾಜಿಬಾನಪೇಟೆಯ ತುಳಜಾ ಭವಾನಿ, ದುರ್ಗಾದೇವಿ ದೇವಸ್ಥಾನ, ಅಕ್ಕಿಹೊಂಡ ಗಣಪತಿ ದೇವಸ್ಥಾನ, ಕೋರ್ಟ್ ವೃತ್ತದ ಶ್ರೀ ಸಾಯಿ ಮಂದಿರ ಸೇರಿ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಹೋಮ, ಹವನ ಜರುಗಿದವು.