

ಚಿತ್ರದುರ್ಗ: ನಗರದ ಬಿಡಿ ರಸ್ತೆ ಎಸ್‌ಬಿಐ ಎದುರಿನ ವಾಣಿಜ್ಯ ಸಂಕೀರ್ಣಗಳಿರುವ ಕಟ್ಟಡದಲ್ಲಿ ಭಾನುವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.
ಕಟ್ಟಡದಲ್ಲಿದ್ದ ಕರ್ನಾಟಕ ಒನ್ ಹಾಗೂ ಅಜಂತಾ ಸ್ಟುಡಿಯೋ, ಕ್ಯಾಮರಾ ರಿಪೇರಿ ಮತ್ತು ಫ್ರೇಮ್ ವರ್ಕ್ಸ್ ಶಾಪ್‌ನಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.
ಕರ್ನಾಟಕ ಒನ್‌ನಲ್ಲಿ 6 ಲಕ್ಷ ರೂ., ಅಜಂತಾ ಸ್ಟುಡಿಯೋ, ಕ್ಯಾಮರಾ ರಿಪೇರಿ ಮತ್ತು ಫ್ರೇಮ್ ವರ್ಕ್ಸ್ ಶಾಪ್‌ನಲ್ಲಿ 8 ಲಕ್ಷ ರೂ.ಮೌಲ್ಯದ ವಸ್ತುಗಳು ಸುಟ್ಟಿವೆ ಎಂದು ಶಾಪ್‌ಗಳ ಮಾಲೀಕರು ಅಂದಾಜಿಸಿದ್ದಾರೆ. ನಷ್ಟದ ಸಂಪೂರ್ಣ ವಿವರವಿನ್ನೂ ಗೊತ್ತಾಗಬೇಕಿದೆ ಎಂದು ಅಗ್ನಿ ಶಾಮಕದಳದವರು ತಿಳಿಸಿದ್ದಾರೆ.
ಸದಾ ಜನದಟ್ಟಣೆಯಿಂದ ಕೂಡಿರುವ ವಾಣಿಜ್ಯ ಸಂಕೀರ್ಣಗಳಿರುವ ಕಟ್ಟಡದಲ್ಲಿ ಆದ ಬೆಂಕಿ ಅವಘಡದಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಚಳ್ಳಕೆರೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಸ್ತುಗಳ ಜತೆಗೆ ಲಕ್ಷಾಂತರ ರೂ.ಮೌಲ್ಯದ ಕಟ್ಟಡಕ್ಕೂ ಹಾನಿಯಾಗಿದೆ. ಈ ಕಟ್ಟಡದ ಪಕ್ಕದಲ್ಲಿ ಖಾಲಿ ನಿವೇಶನ ಹಾಗೂ ಕಟ್ಟಡಕ್ಕೆ ಹೊಂದಿಕೊಂಡಂತೆ ತಗಡಿನ ಶೆಡ್ ಕೂಡ ಇತ್ತು. ತ್ಯಾಜ್ಯದಿಂದ ಬೆಂಕಿ ಹೊತ್ತಿಕೊಂಡಿರಬಹುದು. ನಿರ್ದಿಷ್ಟ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.