

ಕೊಡಗು: ಕುಶಾಲನಗರದಲ್ಲಿ ಪುರಸಭೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ವಾಣಿಜ್ಯ ಕಟ್ಟಡದ ಕಾಮಗಾರಿಯನ್ನು ಶಾಸಕ ಡಾ.ಮಂತರ್‌ಗೌಡ ಮಂಗಳವಾರ ಪರಿಶೀಲಿಸಿದರು.
ಕಾಮಗಾರಿ ನೀಲಿನಕ್ಷೆ ಪ್ರಕಾರ ನಡೆಯುತ್ತಿಲ್ಲ. ಈಗಾಗಲೇ ನಡೆದಿರುವ ಕಾಮಗಾರಿಯೂ ಅವೈಜ್ಞಾನಿಕವಾಗಿದೆ. ಸ್ಥಳಕ್ಕೆ ಭೇಟಿ ನೀಡುವುದಾಗಿ ಮೊದಲೇ ತಿಳಿಸಿದ್ದರೂ ಗುತ್ತಿಗೆದಾರರು ಬಂದಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ನಂತರ, ಸಂಬಂಧಿಸಿದವರಿಂದ ಸಮರ್ಪಕ ಮಾಹಿತಿ ಪಡೆಯುವಂತೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ಸೂಚನೆ ನೀಡಿದರು.
ಬಳಿಕ ನಗರದ ಕನ್ನಡ ಕಲಾ ಭವನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಡಾ.ಮಂತರ್‌ಗೌಡ ಅವರು, ಕಲಾ ಭವನ ನಿರ್ಮಾಣ ಸಂಬಂಧ ಯೋಜನಾ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಭವನಕ್ಕೆ ಅಗತ್ಯವಿರುವ ಕುರ್ಚಿ, ಸೌಂಡ್ ಸಿಸ್ಟಮ್ ಮತ್ತು ಲೈಟಿಂಗ್ಸ್ ವ್ಯವಸ್ಥೆ ಮಾಡಲು ಸಚಿವರ ಜತೆ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲೂ ಹಾಜರಿರದ ಅಧಿಕಾರಿಗಳನ್ನು ಶಾಸಕರು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು. ಇಷ್ಟು ವರ್ಷ ಏನು ಮಾಡಿದ್ದೀರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ, ಇಲ್ಲವಾದರೆ ಬೇರೆ ಕಡೆ ಕೆಲಸ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕರು ಎಚ್ಚರಿಸಿದರು.
ಇದಾದ ಬಳಿಕ ನಗರದ ಹಳೆಯ ಮಾರುಕಟ್ಟೆ ಜಾಗದಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಂಜುನಾಥ್ ಗುಂಡೂರಾವ್, ಪುರಸಭೆ ಇಂಜಿನಿಯರ್ ರಂಗರಾಜ್ ಇತರರು ಹಾಜರಿದ್ದರು.