

ಚಿತ್ರದುರ್ಗ:
ಪ್ರಸಕ್ತ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕಾಗಿವೆ.
ಮುಂಗಾರು ಹಂಗಾಮಿನ ಬಿತ್ತನೆಗೆ ಜಿಲ್ಲೆಯಲ್ಲಿ 25,045 ಮೆಟ್ರಿಕ್‌ಟನ್ ರಸಗೊಬ್ಬರ, 35,000 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನಿಟ್ಟಿದ್ದು, ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಸುಗಮವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಮುಂಗಾರು ಹಂಗಾಮಿಗೆ ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ತೊ ಗರಿ, ರಾಗಿ ಸೇರಿ 31,801ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಕೆಎಸ್‌ಎಸ್‌ಸಿ, ಎನ್‌ಎಸ್‌ಸಿ, ಕೆಒಎಫ್ ಸಂಸ್ಥೆಗಳು ಹಾಗೂ ಖಾಸಗಿ ಬಿತ್ತನೆ ಬೀಜ ಸರಬರಾಜುದಾರ ಸಂಸ್ಥೆಗಳಲ್ಲಿ 35,000 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ. ಬೇಡಿಕೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಈಗಾಗಲೇ 3228 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ 3,26,748 ಹೆಕ್ಟೇರ್ ಬಿತ್ತನೆಗೆ ಸಜ್ಜಾಗಿದೆ. 3,01,562 ಸಾಗುವಳಿದಾರರಿದ್ದು, ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 3,26,748 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದೆ. ಈವರೆಗೆ 27,872ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.8.53 ಪ್ರಗತಿಯಾಗಿದೆ.
ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್ ಸೇರಿ 64,171 ಮೆಟ್ರಿಕ್‌ಟನ್ ರಸಗೊಬ್ಬರದ ಬೇಡಿಕೆ ಇದೆ. ಖಾಸಗಿ ಡೀಲರ್ಸ್, ಕೆಎಸ್‌ಎಸ್‌ಸಿ ಹಾಗೂ ಮಾರುಕಟ್ಟೆ ಫೆಡರೇಷನ್ ಮೂಲಕ 39,610 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದೆ. 14,565 ಮೆಟ್ರಿಕ್ ಟನ್ ವಿತರಣೆಯಾಗಿದೆ. 25,045 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಜುನಾಥ ತಿಳಿಸಿದ್ದಾರೆ. ಉಳುಮೆ ಸಾಂದರ್ಭಿಕ ಚಿತ್ರ ಬಳಸಿ (ಸಿಟಿಡಿ 11 ಬಿ.ಮಂಜುನಾಥ್)