

ವಿಜಯವಾಣಿ ವಿಶೇಷ ವಾಡಿ: 2017ರಲ್ಲಿ ಜರುಗಿದ್ದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸುವ ಮೂಲಕ ವಾಡಿ ಪುರಸಭೆಯ ಗದ್ದುಗೆ ಏರಿತು.
ಮೊದಲ ಅವಧಿಯ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ಎರಡನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಗುರುವಾರ ನಡೆಯಲಿದೆ. ವಾರದಿಂದ ಕಾಂಗ್ರೆಸ್ ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳ ಮೊಬೈಲ್ ಸ್ವಿಚ್ ಆಫ್ ಮಾಡಿ ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿರುವುದು, ಪೂರಸಭೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಶುರುವಾಗಿದೆ.
ಶಾಸಕ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಹಾಗೂ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅವರ ಸ್ವಂತ ಊರಾಗಿದ್ದರಿಂದ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. 23 ಸದಸ್ಯರ ಬಲ ಹೊಂದಿರುವ ಪುರಸಭೆಗೆ ಅಧಿಕಾರ ಹಿಡಿಯಲು 13 ಜನರ ಸರಳ ಬಹುಮತದ ಅವಶ್ಯಕತೆಯಿದೆ. ಆದರೆ, ಇಬ್ಬರು ಪಕ್ಷೇತರರೊಂದಿಗೆ 15 ಜನರ ಬೆಂಬಲವಿದ್ದರೂ, ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗುವ ಅನಿವಾರ್ಯತೆ ಏನಿತ್ತು ಎಂಬುವುದು ಯಕ್ಷ ಪ್ರಶ್ನೆ.
ಕಾಂಗ್ರೆಸ್ ಸದಸ್ಯರಲ್ಲಿ ಪಕ್ಷನಿಷ್ಠೆಯ ಕೊರತೆ ಮತ್ತು ಆಕಾಂಕ್ಷಿಗಳು ಅಧಿಕವಿರುವುದು ಹೈಕಮಾಂಡ್ಗೆ ತಲೆನೋವಾಗಿದೆ. ಹಿಂದೊಮ್ಮೆ ಕುದುರೆ ವ್ಯಾಪಾರ ನಡೆದು ಅಧಿಕಾರ ಕಳೆದುಕೊಂಡ ಅನುಭವವೂ ಇದೆ.
ತಲೆನೋವಾದ ಜಾತಿ ಲೆಕ್ಕಾಚಾರ: ಈ ಕ್ಷೇತ್ರದಲ್ಲಿ ಕೋಲಿ ಸಮಾಜದ ಮತ್ತು ಮುಸ್ಲಿಂ ಸಮುದಾಯದ ಮತದಾರರು ಅಧಿಕವಾಗಿರುವುದರಿಂದ ಅಧ್ಯಕ್ಷಗಿರಿಗೆ ಶಕ್ತಿ ಮೀರಿ ಪ್ರಯತ್ನಗಳು ನಡೆದಿವೆ. ಅಧ್ಯಕ್ಷ ಸ್ಥಾನ ಬಿಸಿ(ಎ) ಮೀಸಲಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ವಾರ್ಡ್ 8ರ ಸದಸ್ಯೆ ಸುಗಂಧ ಅವರಿಗೆ ಜಾತಿ ಬಲ ಪ್ಲಸ್. ಆದರೆ ಮಹಿಳೆಯರು ಕೇವಲ ಸಾಮಾನ್ಯ ಸಭೆಗೆ ಸೀಮಿತವಾಗುತ್ತಾರೆ ಎಂಬ ಆಪಾದನೆಯೂ ಇದೆ. ಇನ್ನೊಬ್ಬ ಪ್ರಬಲ ಆಕಾಂಕ್ಷಿ ಪೃಥ್ವಿರಾಜ್ ಸೂರ್ಯವಂಶಿ ಪಕ್ಷನಿಷ್ಠೆ ಪ್ರಾಮಾಣಿಕತೆ ಅವರಿಗೆ ಪ್ಲಸ್ ಆದರೆ ಮರಾಠಾ ಸಮುದಾಯದ ಮತದಾರರು ಕಡಿಮೆ ಇದ್ದಾರೆ. ಬಹುತೇಕರು ಬಿಜೆಪಿ ಪರ ಇದ್ದಾರೆ ಎಂಬ ಆಪಾದನೆಯೂ ಇದೆ. ಆದರೂ, ಮಲ್ಲಯ್ಯ ಗುತ್ತೇದಾರ್, ಅಫ್ಸರಾ ಬೇಗಂ, ಝರಿನಾ ಬೇಗಂ, ಹಸಿನಾ ಬೇಗಂ ಖುರೇಶಿ ಅಧ್ಯಕ್ಷ ಪದವಿ ಆಕಾಂಕ್ಷಿಗಳು. ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಿರುವುದರಿಂದ ದೇವಿಂದ್ರ ಕರದಳ್ಳಿ, ಗುಜ್ಜಾಬಾಯಿ ಸಿಂಗೆ, ತಿಮ್ಮಯ್ಯ ಪವಾರ, ಗಂಗಾ ತುಕಾರಾಮ ಆಕಾಂಕ್ಷಿಯಾಗಿದ್ದಾರೆ. ವರಿಷ್ಠರ ಕೃಪೆ ಯಾರ ಮೇಲಿದೆ ಎನ್ನುವುದಕ್ಕೆ ಸೆ. 3ರವರೆಗೆ ಕಾಯಬೇಕು.
ಪುರಸಭೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತವಿಲ್ಲ. ಹಾಗಾಗಿ ಅಭಿವೃದ್ಧಿಪರ ಆಲೋಚನೆ ಇರುವವರು ಅಧ್ಯಕ್ಷರಾದರೆ ಅವರಿಗೆ ನಮ್ಮ ಸ್ವಾಗತ. ಒಬ್ಬ ಪಕ್ಷೇತರ ಸೇರಿ ಎಂಟು ಸದಸ್ಯರ ಬಲ ಹೊಂದಿದ್ದೇವೆ. ನಮ್ಮ ಓಟು ನಮ್ಮ ಪಕ್ಷದ ಅಭ್ಯರ್ಥಿಗೆ ಹಾಕುತ್ತೇವೆ.
| ಬಸವರಾಜ ಪಂಚಾಳ, ಅಧ್ಯಕ್ಷ, ಬಿಜೆಪಿ ಶಕ್ತಿ ಕೇಂದ್ರ ವಾಡಿ