

ಭಾಲ್ಕಿ: ಅಪ್ರತಿಮ ಹುಟ್ಟು ಹೋರಾಟಗಾರ, ಸಮಾಜ ಸುಧಾರಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೀರಾಚಂದ ವಾಘಮಾರೆ ಅವರ ಜೀವನ ಇತರರಿಗೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೂರೆ ಹೇಳಿದರು.
ಪಟ್ಟಣದ ರಾಮದಾಸ ಮಠದಲ್ಲಿ ರೈತ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸ್ವಾತಂತ್ರ್ಯಹೋರಾಟಗಾರ ಹೀರಾಚಂದ ವಾಘಮಾರೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ವಾಘಮರೆ ಅತ್ಯಂತ ಸರಳ ಸಜ್ಜನಿಕೆ ವ್ಯಕ್ತಿಯಾಗಿ ಸದಾ ರಾಷ್ಟçಪ್ರೇಮ, ಸಮಾಜ ಸುಧಾರಣೆಯ ಒಬ್ಬ ಪ್ರಗತಿಪರ ಚಿಂತಕರಾಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ತನ್ನ ಘನತೆ ಹೆಚ್ಚಿಸಿಕೊಂಡಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಪ್ಕೆ ಮಾತನಾಡಿ, ಹೀರಾಚಂದ ವಾಘಮರೆ ಸತ್ಯನಿಕೇತನ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ, ಆಗಿನ ಕಾಲದಲ್ಲಿ ಗ್ರಾಮೀಣ ಭಾಗದ ಬಡ ರೈತಾಪಿ ಮಕ್ಕಳಿಗೆ ಶಿಕ್ಷಣ ಪಡೆಯುವ ಭಾಗ್ಯ ಕಲ್ಪಿಸಿದರು. ೯೫ರ ಇಳಿ ವಯಸ್ಸಿನಲ್ಲಿಯೂ ಅತ್ಯಂತ ಕ್ರಿಯಾಶೀಲರಾಗಿ ಸಮಾಜೋದ್ಧಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೀರಾಚಂದ ವಾಘಮಾರೆ, ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಭಾವನೆಯಿಂದ ಸಮಾಜ ಸೇವೆಗೈಯುವವರಿಗೆ ಎಲ್ಲೆಡೆ ಗೌರವ ದೊರೆಯುತ್ತದೆ ಎಂದು ಹೇಳಿದರು.
ರೈತ ಸಂಘದ ಮಹಿಳಾ ಪ್ರತಿನಿಧಿ ಮಹಾನಂದಾ ದೇಶಮುಖ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಅಶೋಕ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು.
ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ರೈತ ಮುಖಂಡರಾದ ಶೇಶರಾವ ಕಣಜಿಕರ್, ಶರದ ಪಾಟೀಲ, ಬಾಬುರಾವ ಭಾಸ್ತೆ, ಸುಧಾಕರ ಲಖಣಗಾಂವ, ಪ್ರೊ.ರಾಜಕುಮಾರ ಪಾಟೀಲ್, ಉಮಾ ಮಾಶಟ್ಟೆ, ವಸಂತರಾವ ಸೋನಜಿ, ಡಿಗಂಬರಾವ ಗೋಬಾಳೆ, ಸುರೇಶ ಭೈರೆ, ಸತೀಶ ಭೈರೆ, ತಿಪ್ಪಣ್ಣ ಕಣಜಿ, ಮಲ್ಲಿಕಾರ್ಜುನ ಕನಕಟ್ಟೆ ಇತರರಿದ್ದರು.