ವಾಕಿಂಗ್, ಜಾಗಿಂಗ್ಗೆ ಕರೊನಾ ಎಫೆಕ್ಟ್

1803 KLB01
Published on


ಬಾಬುರಾವ ಯಡ್ರಾಮಿ ಕಲಬುರಗಿ
ಕರೊನಾ ತನ್ನ ಕಬಂಧ ಬಾಹುವನ್ನು ಬಹುತೇಕ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿ ಬಿಸಿ ಮುಟ್ಟಿಸಿದೆ. ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಮಾಡುವ ವಾಕಿಂಗ್, ಜಾಗಿಂಗ್ಗೂ ಬ್ರೆಕ್ ಬಿದ್ದಿದೆ.
ನಗರದ ಪ್ರಮುಖ ವಾಕಿಂಗ್ ತಾಣಗಳಾಗಿರುವ ಮಹಾನಗರ ಪಾಲಿಕೆಯ ಸಾರ್ವಜನಿಕ ಉದ್ಯಾನವನ, ಚಂದ್ರಶೇಖರ ಪಾಟೀಲ್ ಸ್ಟೇಡಿಯಂ, ಅಪ್ಪನ ಕೆರೆ ಗಾರ್ಡನ್, ಐವಾನ್-ಇ-ಶಾಹಿ ಅತಿಥಿಗೃಹ ಆವರಣ, ಗುಲ್ಬರ್ಗ ವಿಶ್ವವಿದ್ಯಾಲಯ ಕ್ಯಾಂಪಸ್, ರಿಂಗ್ ರೋಡ್ನಲ್ಲಿರುವ ಥೀಮ್ ಪಾಕರ್್ ಉದ್ಯಾನವನ, ಗ್ರೀನ್ ಸಿಟಿ, ಎನ್. ವಿ. ಮೈದಾನ ಹೀಗೆ ಹಲವು ಕಡೆಗಳಲ್ಲಿ ವಾಕಿಂಗ್ ಮಾಡುವವರ ಸಂಖ್ಯೆ ತಗ್ಗಿದೆ.
ಕರೊನಾ ಭಯ ಪ್ರತಿನಿತ್ಯ ಹೆಚ್ಚುತ್ತಿದೆ. ಜನರು ಒಂದೆ ಕಡೆಗೆ ಜಮಾಗೊಳ್ಳುವುದನ್ನು ತಪ್ಪಿಸಲು ಜಿಲ್ಲಾಡಳಿತ ಎಲ್ಲ ಕ್ರಮ ಕೈಕೊಂಡಿದೆ. ಜನರ ಸುರಕ್ಷತೆಯ ದೃಷ್ಟಿಯಿಂದಾಗಿ ಸ್ಟೇಡಿಯಂ, ಪಬ್ಲಿಕ್ ಗಾರ್ಡನ್ಗಳನ್ನು ಜಿಲ್ಲಾಡಳಿತವೇ ಬಂದ್ ಮಾಡಿದೆ. ಅಲ್ಲದೆ ಕ್ರೀಡಾಂಗಣದಲ್ಲಿ ನಿತ್ಯ ವಾಕಿಂಗ್ ಬರುತ್ತಿದ್ದ ಜನರನ್ನು ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಬಿ.ಶರತ್ ಮತ್ತು ಜಿಲ್ಲಾ ಕ್ರೀಡಾ ಅಧಿಕಾರಿ ಭಾಸ್ಕರ್ ನಾಯಕ ಅವರೇ ಖುದ್ದು ಭೇಟಿ ಮಾಡಿ ಕೆಲ ದಿನಗಳ ಮಟ್ಟಿಗೆ ವಾಕಿಂಗ್ ಬರಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಅಲ್ಲದೆ ಸ್ಟೇಡಿಯಂ ಪ್ರವೇಶ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಪತಂಜಲಿ ಯೋಗ ಕೇಂದ್ರ, ಜಿಮ್ಗಳಿಗೂ ತಾತ್ಕಾಲಿಕ ಬ್ರೇಕ್
ಕಸರತ್ತು ಮಾಡಿ ಬೆವರಿಳಿಸಲು ಜಿಮ್ಗಳಲ್ಲಿ ಸಹ ನಿತ್ಯ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಹಲವರು ಸೇರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಜಿಮ್ಗಳನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪತಂಜಲಿ ಯೋಗ ಕೇಂದ್ರದಿಂದ ನಗರದ ವಿವಿಧ ಕಡೆಗಳಲ್ಲಿ ನಡೆಸುತ್ತಿರುವ ಯೋಗ ಕೇಂದ್ರಗಳನ್ನು ಸಹ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಕರೊನಾ ವೇಗವಾಗಿ ಹರಡುವುದನ್ನು ತಪ್ಪಿಸಲು ಜಿಲ್ಲಾಡಳಿತ ಸ್ಟೇಡಿಯಂಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದೆ. ಇದು ಒಳ್ಳೆಯ ಕ್ರಮವಾಗಿದೆ. ಇದರಿಂದ ಜನರು ಒಂದೇ ಕಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಗೊಳ್ಳುವುದಕ್ಕೂ ತಡೆ ಬೀಳಲಿದೆ. ಆರೋಗ್ಯವೇ ಮುಖ್ಯ, ಜನರು ಜಾಗೃತರಾಗಿರಬೇಕು.
| ಶಿವರಾಜ ಭಾಸಗಿ ಅಧ್ಯಕ್ಷ

ವಾಕರ್ಸ್ ಮತ್ತು ಜಾಗರ್ಸ್ ಅಸೋಸಿಯೇಷನ್ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಫಿಟ್ ಆಗಿರಲು ವಾಕಿಂಗ್ ಮಾಡುತ್ತೇವೆ. ಇದೇ ವೇಳೆಯಲ್ಲಿ ಹೊಸ ಸೋಂಕು ಬಂದರೆ ಏನು ಮಾಡೋದು. ವಾಯು ವಿಹಾರ ಸ್ಥಳದಲ್ಲಿ ಹೆಚ್ಚಿನ ಜನರು ಜಮಾಗೊಳ್ಳುವುದರಿಂದ ಕರೊನಾ ಸೋಂಕಿತರು ಅಲ್ಲಿಗೆ ಬಂದಲ್ಲಿ, ಸೋಂಕು ಹರಡುವಿಕೆ ಹೆಚ್ಚಳಗೊಳ್ಳುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ಗಮನ ಕೊಡಬೇಕು.
| ಗುರುಲಿಂಗಪ್ಪಗೌಡ ಪಾಟೀಲ್ ಮಾಜಿ ಉಪಾಧ್ಯಕ್ಷ
ಆಂದೋಲಾ ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net