ವಾಕಥಾನ್​ಗೆ ಉತ್ತಮ ಸ್ಪಂದನೆ

h8-Marthon 1
Published on

ಹುಬ್ಬಳ್ಳಿ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ನ್ಯೂಸ್ ಹುಬ್ಬಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ವಾಕಥಾನ್​ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಪತ್ರಿಕೆ ಕರೆಗೆ ಓಗೊಟ್ಟು ನೂರಾರು ಸಂಖ್ಯೆಯಲ್ಲಿ ಮಹಿಳೆಯರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ್ದರು. ವಿವಿಧ ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮಹಿಳಾ ಮೋರ್ಚಾಗಳ ಸದಸ್ಯೆಯರು ಜಮಾವಣೆಗೊಂಡಿದ್ದರು.

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಚಲನಚಿತ್ರ ನಟಿ ತಾರಾ, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್​ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ವಾಣಿ ಆನಂದ ಸಂಕೇಶ್ವರ ಅವರು ರಾಣಿ ಚನ್ನಮ್ಮ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ನಂತರ ವಾಕಥಾನ್​ಗೆ ಚಾಲನೆ ನೀಡಿದರು.

ರಾಣಿ ಚನ್ನಮ್ಮ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಹಳೇ ಕೋರ್ಟ್ ವೃತ್ತ, ಐಬಿ ರಸ್ತೆ, ಶಾರದಾ ಹೋಟೆಲ್ ಮೂಲಕ ಸಂಚರಿಸಿ, ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣ ತಲುಪಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಮಹಿಳಾಪರ ಘೋಷಣೆಗಳುಳ್ಳ ಬ್ಯಾನರ್​ಗಳನ್ನು ಪ್ರದರ್ಶಿಸಿದರು. ಸುಳ್ಳದ ಮಹಿಳಾ ಡೊಳ್ಳು ತಂಡ ಮೆರವಣಿಗೆಗೆ ಮತ್ತಷ್ಟು ರಂಗು ನೀಡಿತ್ತು. ಪ್ರಮುಖ ವೃತ್ತಗಳಲ್ಲಿ ಮಹಿಳಾ ಡೊಳ್ಳು ತಂಡದವರು ವಿಶೇಷ ಪ್ರದರ್ಶನ ನೀಡಿದರು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿದ್ದ ಅನೇಕ ಮಹಿಳೆಯರು, ಡೊಳ್ಳು ಕಟ್ಟಿಕೊಂಡು ಸಂಭ್ರಮಿಸಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲ ಮಹಿಳೆಯರು ಡೊಳ್ಳು ನಾದಕ್ಕೆ ನೃತ್ಯವನ್ನೂ ಮಾಡಿದರು.

ವಿಜಯವಾಣಿ ಹಾಗೂ ದಿಗ್ವಿಜಯ ಪ್ರತಿವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆಯೋಜಿಸುವ ವಾಕಥಾನ್​ಗೆ ಅನೇಕ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದಿನ ಬಾರಿ ವಾಕಥಾನ್​ನಲ್ಲಿ ಪಾಲ್ಗೊಂಡಿದ್ದ ಹಲವಾರು ಮಹಿಳೆಯರು, ಈ ಬಾರಿಯೂ ಪಾಲ್ಗೊಂಡು ಸಂಭ್ರಮಿಸಿದರು. ಮಹಿಳೆಯರೊಂದಿಗೆ ಬಂದಿದ್ದ ಪತಿ, ಮಕ್ಕಳು, ಸಹೋದರರು ಸಹ ವಾಕಥಾನ್​ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net