

ಹಾಸನ : ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಅತಿ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದ ಸ್ಕೌಟ್ ಅಂಡ್ ಗೈಡ್ಸ್ ಬಳಿ ಇರುವ ಐಎಂಎ ಹಾಲ್ ಆವರಣದಿಂದ ಹೇಮಾವತಿ ಪ್ರತಿಮೆವರೆಗೂ ಭಾರತೀಯ ವೈದ್ಯಕೀಯ ಸಂಘದ ಶಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸೈಕ್ಲಿಂಗ್ ಮತ್ತು ವಾಕಥಾನ್ ಜಾಥವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಆರೋಗ್ಯ ದಿನದ ಅಂಗವಾಗಿ ವಾಕಥಾನ್ ಮತ್ತು ಸೈಕ್ಲಿಂಗ್ ಕಾರ್ಯಕ್ರಮಕ್ಕೆ ಎಲ್ಲರೂ ಸಂತೋಷದಿಂದ ಪಾಲ್ಗೊಂಡಿದ್ದಾರೆ. ಕೊರೋನಾ ಬಂದ ನಂತರವು ಬೇರೆ ಬೇರೆ ಕಾಯಿಲೆಗಳು ಹೆಚ್ಚಾಗಿ ಬರುವುದರಿಂದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು. ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿ ಶ್ರಮಪಟ್ಟರೂ ಆರೋಗ್ಯ ಉತ್ತಮವಾಗಿಲ್ಲ ಎಂದರೆ ಎಲ್ಲವೂ ವ್ಯರ್ಥವಾಗುತ್ತದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾ ಡಾ. ಅಬ್ದುಲ್ ಬಶೀರ್ ಮಾತನಾಡಿ, ಎಲ್ಲರಿಗೂ ಆರೋಗ್ಯ ಅತ್ಯಗತ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಿ ನಮ್ಮ ಆರೋಗ್ಯ ಕಡೆಗಣಿಸುತ್ತಿದ್ದೇವೆ. ಏನಾದರೂ ಕಾಯಿಲೆ ಬಂದರೆ ಪ್ರಾರಂಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳದೇ ಗಂಭೀರವಾದ ಮೇಲೆ ಆಸ್ಪತ್ರೆ ಸೇರಿ ಸಾಕಷ್ಟು ಜನರು ಸಾವನಪ್ಪುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಆರೋಗ್ಯದ ಕಡೆ ಏಕೆ ಹೆಚ್ಚಿನ ಗಮನ ಕೊಡಬೇಕು? ರಾತ್ರಿ ಮಲಗಿದವರು ಬೆಳಿಗ್ಗೆ ಏಕೆ ಸಾಯುತ್ತಿದ್ದಾರೆ? ಇತ್ತೀಚೆಗೆ ಹೆಚ್ಚೆಚ್ಚು ಜನರು ಸಾಯುತ್ತಿರುವುದು ಏಕೆ? ನಮ್ಮ ಆರೋಗ್ಯದ ಬಗ್ಗೆ ಏಕೆ ಕಾಳಜಿ ವಹಿಸಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ವಿಶೇಷವಾದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಾವು ಪ್ರತಿನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಬದಲಾವಣೆ ಅಗತ್ಯ. ಇನ್ನು ಬೀಡಿ, ಸಿಗರೇಟ್, ಮದ್ಯಪಾನ ಮಾಡುವವರ ಆರೋಗ್ಯ ಬೇಗನೇ ಹಾಳಾಗುತ್ತದೆ. ಬ್ರೈನ್ ಸ್ಟ್ರೋಕ್, ಹೃದಯಾಘಾತ, ಕಿಡ್ನಿ ಸಮಸ್ಯೆ, ಶುಗರ್, ಬಿಪಿಯಿಂದ ಬಳಲುತ್ತಿದ್ದಾರೆ. ಎಲ್ಲಾ ರೋಗಳಿಗೂ ಕಾಳಜಿ ವಹಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯಕರವಾಗಿ ಜೀವಿಸಬಹುದು ಎಂದು ಸಲಹೆ ನೀಡಿದರು.
ಇದೇ ವೇಳೆ ಜಿಲ್ಲಾ ಪಂಚಾಯತಿ ನಿವೃತ್ತ ಸಿಇಒ ಬಿ.ಎ. ಪರಮೇಶ್, ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಪಿ. ಮೋಹನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ರವಿನಾಕಲಗೂಡು, ಬನವಾಸೆ ಮಂಜು, ಚೌಡಹಳ್ಳಿ ಜಗದೀಶ್, ತೋಫಿಕ್, ವೈದ್ಯರುಗಳಾದ ದೇವದಾಸ್, ಸೌಮ್ಯಾ, ಭಾರತೀ ರಾಜಶೇಖರ್, ಸುರೇಶ್ ಗುರೂಜಿ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಪರಮೇಶ್, ಕಲ್ಲಹಳ್ಳಿ ಹರೀಶ್ ಇತರರು ಉಪಸ್ಥಿತರಿದ್ದರು.