ವಹಿವಾಟು ಅವಧಿ ಕಡಿತ

11sdp5
Published on

ಸಿದ್ದಾಪುರ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆಯಾಗಿ ಪಟ್ಟಣದಲ್ಲಿ ಸೋಮವಾರದಿಂದ ಜು.31ರವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ವ್ಯಾಪಾರ ವಹಿವಾಟು ನಡೆಸಲು ತೀರ್ವನಿಸಲಾಗಿದೆ.

ಪಪಂ ಸಭಾಂಗಣದಲ್ಲಿ ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ವರ್ತಕರ ಸಂಘ, ಪ.ಪಂ. ಸದಸ್ಯರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ ಮಾತನಾಡಿ, ಸಿದ್ದಾಪುರ ತಾಲೂಕಿಗೂ ಕರೊನಾ ಕಾಲಿಟ್ಟಿರುವುದರಿಂದ ನಾವು ವ್ಯಾಪಾರದ ಅವಧಿಯನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ನಡೆಸುವುದು ಸೂಕ್ತ ಎಂದರು.

ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ಅನೇಕ ಕಡೆ ಅಂಗಡಿಕಾರರೆ ಮಾಸ್ಕ್, ಸ್ಯಾನಿಟೈಸರ್ ಬಳಸುತ್ತಿಲ್ಲ. ಅಂಥವರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಂಜುಳಾ ಭಜಂತ್ರಿ ಮಾತನಾಡಿ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈಯಕ್ತಿಕ ಹಿತಾಸಕ್ತಿ, ಲಾಭನಷ್ಟ ಕಡೆಗಣಿಸಿ ರೋಗ ಹರಡದಂತೆ ಸಹಕರಿಸುವುದು ಮುಖ್ಯ. 2 ಗಂಟೆಗೆ ವ್ಯಾಪಾರ ಮುಗಿಸುವುದರಿಂದ ಅನಾವಶ್ಯಕ ಓಡಾಟ ಕಡಿಮೆಯಾಗುತ್ತದೆ ಎಂದರು.

ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹುಲೇಕಲ್, ಉದ್ಯಮಿ ಆನಂದ ಈರಾ ನಾಯ್ಕ, ಆರ್.ಎಸ್. ಹೆಗಡೆ, ಅಡಕೆ ವ್ಯಾಪಾರಿಗಳ ಸಂಘಟನೆಯ ಆರ್.ಎಂ. ಪಾಟೀಲ, ವರ್ತಕರಾದ ಬಾಲಕೃಷ್ಣ ಶಾನಭಾಗ, ಉಮೇಶ ಹೆಬ್ಳೆ, ನಾಗರಾಜ ದೋಶೆಟ್ಟಿ, ಪ.ಪಂ. ಸದಸ್ಯ ಮಾರುತಿ ನಾಯ್ಕ, ಟಿಎಸ್​ಎಸ್ ಹಾಗೂ ಗ್ರಾಹಕರ ಸೇವಾ ಸಹಕಾರಿ ಸಂಘದ ಪ್ರತಿನಿಧಿಗಳು, ಸಿಪಿಐ ಪ್ರಕಾಶ, ಡಾ.ಸಂತೋಷ ಇತರರಿದ್ದರು. ಪಪಂ ಸದಸ್ಯ ಗುರುರಾಜ ಶಾನಭಾಗ, ನಂದನ ಬೋರ್ಕರ್, ರವಿ ನಾಯ್ಕ ಜಾತಿಕಟ್ಟಾ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net