

ಬೇಲೂರು: ತಾಲೂಕಿನ ಕಾನನಹಳ್ಳಿ ಸಮೀಪದ ಅರೇಹಳ್ಳಿ-ಚೀಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುರುವಾರ ಕಾಡಾನೆ ವಾಹನಗಳನ್ನು ಅಟ್ಟಾಡಿಸಿದ್ದರಿಂದ ಜನರು ಭಯಗೊಂಡರು.
ಗುರುವಾರ ಬೆಳಗ್ಗೆ ಅರೇಹಳ್ಳಿಯಿಂದ ಮೂಡಿಗೆರೆಯತ್ತ ಅರೇಹಳ್ಳಿ-ಚೀಕನಹಳ್ಳಿ ರಸ್ತೆಯ ಕಾನನಹಳ್ಳಿ ರಸ್ತೆಯಲ್ಲಿ ವಾಹನದಲ್ಲಿ ತೆರಳುತಿದ್ದ ಸಂದರ್ಭ ದಿಢೀರ್ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿ ಕಾಡಾನೆ ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದಾಗ ಕೆಲ ವಾಹನಗಳ ಚಾಲಕರು ಹಾರ್ನ್ ಮಾಡಿದ್ದಾರೆ. ವಾಹನದಿಂದ ಶಬ್ದ ಬರುತ್ತಿದ್ದಂತೆ ರೊಚ್ಚಿಗೆದ್ದ ಕಾಡಾನೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಬೆನ್ನಟ್ಟಿತು. ತಕ್ಷಣ ವಾಹನ ಚಾಲಕರು ಹಿಂದಕ್ಕೆ ಸರಿದಿದ್ದರಿಂದ ಕಾಡಾನೆ ಸುಮ್ಮನೆ ನಿಂತಿತು. ರಸ್ತೆ ಪಕ್ಕದಲ್ಲಿ ನಿಂತಿರುವ ಕಾಡಾನೆಯಿಂದ ತೊಂದರೆ ಇಲ್ಲ ಎಂದು ತಿಳಿದು ವಾಹನ ಚಲಾಯಿಸಿದ್ದಾರೆ. ಆದರೆ ಪುನಃ ರೊಚ್ಚಿಗೆದ್ದ ಆನೆ ವಾಹನವನ್ನು ಬೆನ್ನಟ್ಟಿ ಗಾಬರಿಗೊಳಿಸಿತು.
ವಾಹನದೊಳಗಿದ್ದ ಇತರ ಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.