

ಔರಾದ್: ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಹಾಗೂ ಸಂಶೋಧನಾ ಮನೋಭಾವ ಬೆಳೆಯಲು ಸಾಧ್ಯ ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೋರ ಹೇಳಿದರು.
ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಗುರುವಾರ, ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿ ಅವರು, ಮಕ್ಕಳಲ್ಲಿ ಇಂತಹ ಚಟುವಟಿಕೆಗಳಿಂದ ವಿಜ್ಞಾನ ಜ್ಞಾನದ ವಿಸ್ತಾರ ಹೆಚ್ಚುತ್ತ ಹೋದಂತೆ ವೈಜ್ಞಾನಿಕ ತಳಹದಿಯ ಮೇಲೆ ಮಕ್ಕಳು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ನಿತ್ಯದ ಬದುಕಿಗೂ ಅನ್ವಯಿಸಿಕೊಂಡು ಬಾಳುತ್ತಾರೆ ಎಂದರು.
ಅಜೀಂ ಪ್ರೇಮ್‌ಜಿ ಫೌಂಡೇಷನ್ ತಾಲೂಕು ಸಂಯೋಜಕ ಶಿವಾಜಿ ಬಿರಾದಾರ ಮಾತನಾಡಿ, ವಿಜ್ಞಾನದ ಪ್ರಾಯೋಗಿಕ ಬಳಕೆ, ಸೃಜನಶೀಲತೆ ಮತ್ತು ನಾವಿನ್ಯತೆಗೆ ಪ್ರೋತ್ಸಾಹ, ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ ವೃದ್ಧಿ, ಸಮುದಾಯದ ತೊಡಗಿಸಿಕೊಳ್ಳುವಿಕೆ ಇದೆಲ್ಲವೂ ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ನಡೆಯುತ್ತದೆ ಎಂದರು.
ಎಕಲಾರ ಸಿಆರ್‌ಪಿ ಮಹಾದೇವ ಘುಳೆ ಮಾತನಾಡಿದರು. ವಿಜ್ಞಾನ ಶಿಕ್ಷಕ ಗಂಗಾಧರ ಬೇಂದ್ರೆ, ಅಂಕುಶ ಪಾಟೀಲ್, ಸಬೀತಾ ಹಾಗೂ ರೂಪಾ ಅವರ ಮಾರ್ಗದರ್ಶನದಲ್ಲಿ ೬೪ ಮಕ್ಕಳು ೩೨ ಹನಿ ನೀರಾವರಿ ಪದ್ಧತಿ, ಎಟಿಎಂ ಯಂತ್ರ, ಜಲಚಕ್ರ, ಮಳೆ ನೀರಿನ ಕೊಯ್ಲು, ಭೂಮಿ ರಚನೆ, ಜೀವಸತ್ವಗಳ ಪರಿಚಯ, ಸೌರವ್ಯೂಹದ ಮಾದರಿ, ಗ್ರಹಣಗಳು, ಉಸಿರಾಟ ಪ್ರಕ್ರಿಯೆ, ಟ್ರಾಫಿಕ್ ಸಿಗ್ನಲ್, ನೀರಿನ ಶುದ್ಧೀಕರಣ, ಸಸ್ಯ ಜೀವಕೋಶ, ಬೆಳಕಿನ ವಕ್ರಿಭವನ, ಜ್ವಾಲಾಮುಖಿಗಳು, ಪರಿಸರ ಕಾಳಜಿ, ಆಮ್ಲ ಪ್ರತ್ಯಾಮ್ಲಗಳು ಸೇರಿ ೩೨ ಪ್ರದರ್ಶನ ಮಾಡಿದರು. ಇದರಲ್ಲಿ ತಲಾ ಒಂದು ಪ್ರದರ್ಶನದಂತೆ ಬೋರಾಳ ಹಾಗೂ ಬರದಾಪುರ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಶರಣಪ್ಪ ಜಟಗೊಂಡ, ಗಜಾನನ ಮಳ್ಳಾ, ಬಾಲಾಜಿ ಅಮರವಾಡಿ, ದಿಗಂಬರ ಶಾಂತಪೂರೆ, ಕಲ್ಲಪ್ಪ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ಗಂಗಾಧರ ಬೇಂದ್ರೆ, ಸಬೀತಾ, ರೂಪಾ ಇತರರಿದ್ದರು.