

ತುಮಕೂರು : ಶ್ರೀಸಿದ್ಧಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ರೈತಸ್ನೇಹಿಯಾಗಿದ್ದು, ರಾಜ್ಯದಲ್ಲಿಯೇ ಖ್ಯಾತಿಗಳಿಸಿದೆ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ಸಿದ್ಧಗಂಗಾ ಮಠದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಸುವರ್ಣ ಮಹೋತ್ಸವದಲ್ಲಿ ಶ್ರೀಮಠದಿಂದ ಹೊರ ತಂದಿರುವ ವಸ್ತು ಪ್ರದರ್ಶನದ ಇತಿಹಾಸ ತಿಳಿಸುವ ಸ್ಮರಣ ಸಂಚಿಕೆ ‘ಸುವರ್ಣ ದರ್ಶನ’ ಬಿಡುಗಡೆಗೊಳಿಸಿ ಮಾತನಾಡಿದರು.
ಡಾ.ಶಿವಕುಮಾರಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ 1964ರಲ್ಲಿ ಪ್ರಾರಂಭವಾದ ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನ ಇಂದು ವಿಶ್ವ ವಿಖ್ಯಾತಿ ಪಡೆದಿದೆ, ಧಾರ್ಮಿಕ ಆಚರಣೆಯಲ್ಲಿಯೂ ರೈತರಿಗೆ ಆಧುನಿಕ ಕೃಷಿ ಪದ್ಧತಿ ಪರಿಚಯಿಸುವ ಮೂಲಕ ಆಪಾರ ಜನಪ್ರಿಯತೆ ಕೂಡ ಪಡೆದಿದೆ ಎಂದರು.
ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಹಾಗೂ ಕೃಷಿಯಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿಸುವುದೇ ಈ ವಸ್ತು ಪ್ರದರ್ಶನದ ಮೂಲ ಉದ್ದೇಶವಾಗಿದೆ. 12ನೇ ಶತಮಾನದ ಕಾಯಕದಲ್ಲಿ ನಂಬಿಕೆಯಿಟ್ಟಿದ್ದ, ಬಸವಣ್ಣರಾದಿಯಾಗಿ ಎಲ್ಲ ವಚನಕಾರರು ಸಿದ್ಧಗಂಗಾ ಶ್ರೀಗಳಲ್ಲಿ ನಾವು ಕಂಡಿದ್ದೆವೆ ಎಂದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ನಡೆದಾಡುವ ದೇವರ ಕ್ಷೇತ್ರದಲ್ಲಿ ಯಾವುದೇ ಬೇಧ-ಭಾವವಿಲ್ಲದೆ ಅನ್ನ,ಅಕ್ಷರ, ಆಶ್ರಯ ನೀಡುವ ಕೆಲಸವನ್ನು ಮಾಡುತ್ತಿರುವುದು ಮಠದ ಪರಂಪರೆಯ ಬಗ್ಗೆ ಭಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಡಾ.ಶಿವಕುಮಾರಸ್ವಾಮೀಜಿ ಅವರ ಹುಟ್ಟೂರು ವೀರಾಪುರದಲ್ಲಿ 111ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ, ಗ್ರಾಮವನ್ನು ಸರ್ವಾಂಗಿಣ ಅಭಿವೃದ್ಧಿ ಮಾಡಲು ಸರ್ಕಾರ ಮುಂದಡಿಯಿಟ್ಟಿದೆ ಎಂದರು.
ಶ್ರೀಗಳು ಮುಂದಿನ ಪೀಳಿಗೆಗೆ ಆದರ್ಶವಾಗಿದ್ದು ಅವರ ಜೀವನಾನುಭವದ ಕುರಿತ ಕಿರುಚಿತ್ರಕ್ಕಾಗಿ ಚಿತ್ರೀಕರಣ ಮಾಡಲು ಸಿದ್ಧತೆ ನಡೆದಿದೆ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಮಾತನಾಡಿ, ಶಿಕ್ಷಣ, ಮಾಹಿತಿ, ಮನರಂಜನೆಗಳ ಮೂಲಕ ರೈತರಿಗೆ ಹೊಸ ಆವಿಷ್ಕಾರಗಳನ್ನು ತಲುಪಿಸುವುದು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮೂಲ ಉದ್ದೇಶವಾಗಿದೆ ಎಂದರು.
ಡಾ.ಶಿವಕುಮಾರ ಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ ಅನೇಕ ಸತ್ಕಾರ್ಯಗಳು ನಡೆದುಕೊಂಡು ಬರುತ್ತಿವೆ. ಅಂತಹ ಮಹತ್ತರ ಕಾರ್ಯಗಳಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವೂ ಒಂದು ಎಂದರು. ವಸ್ತು ಪ್ರದರ್ಶನದ ಜಂಟಿ ಕಾರ್ಯದರ್ಶಿಗಳಾದ ಎಸ್.ಶಿವಕುಮಾರ್, ಕೆಂ.ಬ. ರೇಣುಕಯ್ಯ, ಬಿ.ಗಂಗಾಧರಯ್ಯ ಮತ್ತಿತರರು ಇದ್ದರು.