ವಸುದೈವ ಕುಟುಂಬಕಂ ಆಶಯ ಸಾಕಾರಕ್ಕೆ ಯತ್ನ

Published on

ಹೊಸಪೇಟೆ: ಪ್ರಸ್ತುತ ಪ್ರಪಂಚದ 3/1 ಭಾಗದ ರಾಷ್ಟ್ರಗಳು ಹಣಕಾಸು ಮುಗ್ಗಟ್ಟು ಹಾಗೂ ಹಿಂಜರಿತ ಅನುಭವಿಸುತ್ತಿವೆ. ಹಸಿವು ಹಾಗೂ ಅಪೌಷ್ಟಿಕತೆ ಹೋಗಲಾಡಿಸಲು, ಸಾರ್ವತ್ರಿಕ ಸ್ವಾಸ್ಥ ಯೋಜನೆ, ಕೋವಿಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ, ಗುಣಮಟ್ಟದ ಶಿಕ್ಷಣ ನೀಡುವ ಕುರಿತಾದ ಪ್ರಮುಖ ವಿಷಯಗಳು, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕ್ರಮಗಳ ಕುರಿತು ಶೆರ್ಪಾ ಸಭೆಗಳಲ್ಲಿ ಚರ್ಚೆ ನಡೆಸಲಾಗುವುದು ಎಂದು ಜಿ-20 ಶೆರ್ಪಾ ಅಮಿತಾಬ್ ಕಾಂತ ಹೇಳಿದರು.

ಹಂಪಿಯಲ್ಲಿ ಆಯೋಜಿಸಿರುವ ಜಿ-20 ಶೆರ್ಪಾ ಸಭೆಗೆ ಆಗಮಿಸಿದ ವಿದೇಶಿ ಅತಿಥಿಗಳನ್ನು ಸಾಂಪ್ರದಾಯಿಕ ವಾದ್ಯಗಳa ಮೂಲಕ ಜಿಂದಾಲ್ ಏರ್‌ಪೋರ್ಟ್‌ನಲ್ಲಿ ಬರಮಾಡಿಕೊಳ್ಳಲಾಯಿತು.

ಹಂಪಿಯಲ್ಲಿ ಗುರುವಾರ 3ನೇ ಶೆರ್ಪಾ ಸಭೆ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾನವನ ಏಳಿಗೆಗೆ ಕಂಟಕವಾಗಿರುವ ಭಯೋತ್ಪಾದನೆ, ಭ್ರಷ್ಟಾಚಾರ, ಆಡಳಿತದಲ್ಲಿ ಅವ್ಯವಹಾರ ಮತ್ತು ಲಂಚಗುಳಿತನವನ್ನು ತೊಡೆದು ಹಾಕಿ, ಪಾರದರ್ಶಕ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆದಿದೆ.

ಸಾಂಸ್ಕೃತಿಕ ಕಾರ್ಯಕಾರಿ ತಂಡದ ಗುರುತಿಸಿರುವ ಸಾಂಸ್ಕೃತಿಕ ಸಹಭಾಗಿತ್ವದಡಿ ಪರಸ್ಪರ ದೇಶಗಳ ಜನರನ್ನು ಒಂದುಗೂಡಿಸಿ, ಈ ಬಾರಿ ಜಿ-20 ಸಭೆಯ ಧ್ಯೇಯವಾಕ್ಯವಾಗಿರುವ ‘ವಸುದೈವ ಕುಟುಂಬಕಂ’ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲಿ ಚಿಂತನೆ ನಡೆಸಲಾಗುತ್ತಿದೆ. ಆದರೆ, ಇಂದಿನ ಆಧುನಿಕ ಯುಗದಲ್ಲೂ ಸುಮಾರು 130 ರಾಷ್ಟ್ರಗಳು ಡಿಜಿಟಲ್ ವ್ಯವಹಾರದಲ್ಲಿ ಹಿಂದುಳಿದಿವೆ. ಕೆಲ ದೇಶಗಳು ಕ್ರಿಪ್ಟೋ ಕರೆನ್ಸಿಯನ್ನು ಉತ್ತೇಜಿಸಲು ತೆರಿಗೆ, ಸೇವಾ ಶುಲ್ಕಗಳ ನಿಗದಿ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.


ಐತಿಹಾಸಿಕ ಹಾಗೂ ಶ್ರೀಮಂತಿಕೆ ಹಿನ್ನೆಲೆ ಹೊಂದಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಈ ಬಾರಿ ಜಿ-20 ಭಾಗವಾಗಿ ಎರಡು ಮಹತ್ವದ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರವಷ್ಟೇ ಕೊನೆಗೊಂಡ 3ನೇ ಸಾಂಸ್ಕೃತಿ ಕಾರ್ಯಕಾರಿ ಶೃಂಗ ಮತ್ತು ಗುರುವಾರ ಆರಂಭಗೊಂಡಿರುವ ಶೆರ್ಪಾ ಸಭೆಗೂ ವಿಜಯನಗರದ ಚಾರಿತ್ರಿಕ ಹಿನ್ನೆಲೆಗೂ ತಾಳೆಯಾಗುತ್ತ್ತಿದೆ. ಹಂಪಿಯ ವಾಸ್ತು ಶಿಲ್ಪ, ಗತವೈಭವಕ್ಕೆ ಜಿ-20 ಪ್ರತಿನಿಧಿಗಳು ಹೃದಯ ತುಂಬಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಅಮಿತಾಬ್ ಕಾಂತ ತಿಳಿಸಿದರು. ಶೆರ್ಪಾ ಜಂಟಿ ಕಾರ್ಯದರ್ಶಿ ಆಶೀಶ ಕುಮಾರ್ ಸಿನ್ಹಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net