ವಸತಿಶಾಲೆ ಪ್ರವೇಶಕ್ಕೂ ಕರೊನಾ ತಡೆ, ಪರೀಕ್ಷೆಗೆ ಕಳುಹಿಸಲು ಪಾಲಕರ ಹಿಂದೇಟು, ಶೇ.50 ಮಕ್ಕಳ ಹಾಜರಿ

16 dhl RS EXAM news- ph 1
Published on

ಬೆಂಗಳೂರು ಗ್ರಾಮಾಂತರ/ದೇವನಹಳ್ಳಿ: ಕರೊನಾ ಮಹಾಮಾರಿ ಈ ಬಾರಿ ವಸತಿ ಶಾಲೆಗಳ ಪ್ರವೇಶದ ಮೇಲೂ ಪ್ರಭಾವ ಬೀರಿದೆ. ಪ್ರತಿವರ್ಷ ಶೇ.95 ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದರು. ಈ ಬಾರಿ ಈ ಸಂಖ್ಯೆ ಶೇ.50ಕ್ಕೆ ಕುಸಿದಿದೆ.

ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಕ್ಕಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ದೂರದ ತಾಲೂಕಿನ ಶಾಲೆಗಳಿಗೆ ದಾಖಲಿಸಲಾಗುತ್ತದೆ ಎಂಬ ಪ್ರಮುಖ ಕಾರಣಕ್ಕೆ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ್ದಾರೆ ಎಂಬುದು ಪ್ರಮುಖ ಕಾರಣವಾದರೆ, ವಸತಿ ಶಾಲೆ ಪ್ರವೇಶಕ್ಕೆ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಬಹುತೇಕ ಮಕ್ಕಳು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನೋಂದಣಿಯಾಗಿದ್ದು, ವಸತಿ ಶಾಲೆ ಪ್ರವೇಶದಿಂದ ವಂಚಿತರಾಗುವಂತಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

1644 ಹಾಜರಿ: ಜಿಲ್ಲೆಯಲ್ಲಿ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ. ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ ಹಾಗೂ ಏಕಲವ್ಯ ವಸತಿ ಶಾಲೆಗಳ ಪ್ರವೇಶಕ್ಕೆ ಜಿಲ್ಲೆಯಾದ್ಯಂತ ಗುರುವಾರ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಜಿಲ್ಲೆಯಲ್ಲಿ 3,256 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 1,644 ಮಕ್ಕಳಷ್ಟೇ ಪರೀಕ್ಷೆಗೆ ಹಾಜರಾಗಿದ್ದರು.

ದೇವನಹಳ್ಳಿ ತಾಲೂಕಿನ ಬೊಮ್ಮವಾರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ 239, ಬೈರಾಪುರದ ಇಂದಿರಾಗಾಂಧಿ ವಸತಿ ಶಾಲೆಗೆ 208 , ಕುಂದಾಣದ ಮುರಾರ್ಜಿ ವಸತಿ ಶಾಲೆಗೆ 243, ವಿಶ್ವನಾಥಪುರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ 272 ಸೇರಿ ಒಟ್ಟು 934 ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು.

3,256 ನೋಂದಣಿ: ದೇವನಹಳ್ಳಿಯಲ್ಲಿ 934, ನೆಲಮಂಗಲ 652, ಹೊಸಕೋಟೆ 573 ಹಾಗೂ ದೊಡ್ಡಬಳ್ಳಾಪುರದಲ್ಲಿ 1,097 ಸೇರಿ 3,256 ಮಕ್ಕಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗಿನ ಪರೀಕ್ಷೆಯಲ್ಲಿ ನೂರು ಅಂಕಗಳ ಬಹುಆಯ್ಕೆ ಪ್ರಶ್ನೆಗಳನ್ನು ನಿಗದಿಪಡಿಸಲಾಗಿತ್ತು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಕೃಷ್ಣಪ್ಪ ಮಾಹಿತಿ ನೀಡಿದರು.

1:3 ಅನುಪಾತದಲ್ಲಿ ವಸತಿ ಶಾಲೆಗಳ ಪ್ರವೇಶಕ್ಕೆ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ, ಈ ಹಿನ್ನೆಲೆಯಲ್ಲಿ 1644 ಮಕ್ಕಳ ಲಿತಾಂಶ ಆಧಾರದ ಮೇಲೆ ಸುಮಾರು 500 ಮಕ್ಕಳಿಗೆ ವಿವಿಧ ವಸತಿ ಶಾಲೆಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು, ನೋಂದಾಯಿಸಿ ವಿದ್ಯಾರ್ಥಿಗಳ ಪೈಕಿ ಶೇ.50 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರೂ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಬಾರಿ ಏಪ್ರಿಲ್ ಅಥವಾ ಮೇನಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿದ್ದವು. ಈ ಬಾರಿ ಕರೊನಾ ಕಾರಣದಿಂದ ಸೆಪ್ಟೆಂಬರ್‌ಗೆ ನಿಗದಿಪಡಿಸಿತ್ತು. ಈಗಾಗಲೆ ಶಾಲೆಗಳು ಆರಂಭವಾಗಿರುವುದು ಹಾಗೂ ಕರೊನಾ ಕಾರಣದಿಂದ ಪಾಲಕರು ಮನೆಯ ಹತ್ತಿರದಲ್ಲಿರುವ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿರುವ ಸಾಧ್ಯತೆ ಇದ್ದು, ಮಕ್ಕಳ ಹಾಜರಿಯಲ್ಲಿ ಕುಸಿತ ಕಾಣಲು ಕಾರಣವಾಗಿದೆ ಎನ್ನಬಹುದು. ಎಸ್. ಕೃಷ್ಣಪ್ಪ, ಶಿಕ್ಷಣ ಇಲಾಖೆಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net