ವಸತಿ ಸೌಲಭ್ಯಕ್ಕೆ ಗೃಹ ಕಾರ್ಮಿಕರ ಆಗ್ರಹ

Protest
Published on

ಚಿತ್ರದುರ್ಗ: ಗೃಹ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ, ಕೊನ್‌ಫೆಡರೇಶನ್ ಆಫ್ ಫ್ರೀ ಟ್ರೇಡ್ ಯೂನಿಯನ್ಸ್ ಆಫ್ ಇಂಡಿಯಾ (ಸಿಎಫ್‌ಟಿಯುಐ) ಕಾರ್ಯಕರ್ತೆಯರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಗೃಹ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ, ಅನ್ಯಾಯ ತಪ್ಪಿಸಬೇಕು. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕಾರ್ಮಿಕರಲ್ಲಿ ನಾವು ಸೇರಿದ್ದೇವೆ. ಸೌಲಭ್ಯಗಳಿಂದಲೂ ವಂಚಿತರಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

ಗೃಹ ಕಾರ್ಮಿಕರಿಗೆ ನೀಡುವ ಸ್ಮಾರ್ಟ್ ಕಾರ್ಡ್ ಕೇವಲ ಗುರುತಿನ ಚೀಟಿಯಾಗಿ ಉಳಿಯದೆ, ಸೌಲಭ್ಯ ವಿತರಿಸಬೇಕು. ಸಾಮಾಜಿಕ ಸುರಕ್ಷತೆಯಾದ ಪಿಎಫ್, ಇಎಸ್‌ಐ, ಪಿಂಚಣಿ, ವೈದ್ಯಕೀಯ ವಿಮೆ, ಮಾತೃತ್ವ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಆಗ್ರಹಿಸಿಸಿದರು.

ಗೃಹ ಕಾರ್ಮಿಕರಿಗೆ ಯೋಗ್ಯವಾದ ಉದ್ಯೋಗ ಕಲ್ಪಿಸಲು ಐಎಲ್‌ಒ ಸಿ 189ನ್ನು ಸ್ಥಾಪಿಸಬೇಕು. ರಾಷ್ಟ್ರೀಯ ಶಾಸನ ರೂಪಿಸಬೇಕು. ಪ್ರಸಕ್ತ ಸಾಲಿನಿಂದಲೇ ಕನಿಷ್ಟ ವೇತನ ಪರಿಷ್ಕರಿಸಬೇಕು. ಸರ್ಕಾರದ ಸೌಲಭ್ಯ ಪಡೆಯಲು ಕಡ್ಡಾಯಗೊಳಿಸಿರುವ ಆಹಾರ ಪಡಿತರ ಚೀಟಿ ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸಬಾರದು ಎಂದು ಕೋರಿದರು.

ಸಂಘಟನೆಯ ಜಯಮ್ಮ, ಗಂಗಮ್ಮ, ಮಂಜುಳಾ, ಮಹಾಲಕ್ಷ್ಮಿ, ವಿಶಾಲಾಕ್ಷಿ, ಶಿಲ್ಪಾ, ಶಾರದಮ್ಮ, ನಾಗಮ್ಮ, ಕಾವ್ಯಾ, ಲತಾ, ಅನುರಾಧಾ, ನಾಗವೇಣಿ, ನಿಸಾ ಸಿಸ್ಟರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net