ವಸತಿ ಸೌಲಭ್ಯಕ್ಕೆ 5 ಲಕ್ಷ ರೂ. ನೀಡಿ

Karmikaru
Published on

ಚಿತ್ರದುರ್ಗ: ನೋಂದಾಯಿತ ಕಾರ್ಮಿಕರ ನವೀಕರಣ ಪ್ರಕ್ರಿಯೆ 1 ವರ್ಷದ ಬದಲು ಹಿಂದಿನಂತೆ 3 ವರ್ಷಕ್ಕೊಮ್ಮೆ ನಿಗದಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬೋಗಸ್ ಕಾರ್ಡ್ ತಡೆಯಲು ಕ್ರಮವಹಿಸುವುದು ಸೇರಿ ವಿವಿಧ ಬೇಡಿಕೆಗೆ ಸ್ಪಂದಿಸುವಂತೆ ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಶೇ 75ರಷ್ಟು ಕಡಿತಗೊಳಿಸಿದ್ದು, ಈ ಹಿಂದಿನಂತೆ ನೀಡಬೇಕು. ಬಾಕಿ ಇರುವ ಲಕ್ಷಾಂತರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಕನಿಷ್ಠ ಶೇ 2ರಷ್ಟು ಸೆಸ್ ಹೆಚ್ಚಳದ ಜೊತೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು, ಸಹಜ ಸಾವಿಗೆ 5 ಲಕ್ಷ ರೂ. ಪರಿಹಾರ, ಮಾಸಿಕ 6 ಸಾವಿರ ರೂ. ಪಿಂಚಣಿ, ಹೆರಿಗೆ ಭತ್ಯೆ 50 ಸಾವಿರ ರೂ. ಠೇವಣಿ ಬದಲು ಖಾತೆಗೆ ನೇರ ವರ್ಗಾವಣೆ, ವಿವಾಹಕ್ಕೆ ಸಹಾಯ ಧನವಾಗಿ 1 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್‌ಹಣವನ್ನು ಮನಸೋ ಇಚ್ಛೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ ವಿರುದ್ಧವಾಗಿ ಸರ್ಕಾರ ದುಂದು ವೆಚ್ಚ ಮಾಡುತ್ತಿದ್ದು, ತಕ್ಷಣ ನಿಲ್ಲಿಸಬೇಕು. ಈವರೆಗೆ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರು, ಅವಲಂಬಿತರಿಗೆ ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರತಿ ಜಿಲ್ಲೆಗೆ 33.5 ಸಾವಿರ ಮಂದಿ ನಿಗದಿಪಡಿಸಿ, ತಲಾ 10 ಕೋಟಿ ರೂ.ನಂತೆ 31 ಜಿಲ್ಲೆಗೆ 310 ಕೋಟಿ ರೂ. ಖರ್ಚು ಮಾಡಲು ಮುಂದಾಗಿದ್ದು, ಇದರಲ್ಲಿ ಭ್ರಷ್ಟಾಚಾರದ ಮಾತು ಕೇಳಿಬರುತ್ತಿದೆ. ಆದ್ದರಿಂದ ಖಾಸಗಿ ಸಹಭಾಗಿತ್ವದ ಈ ಯೋಜನೆ ರದ್ದುಗೊಳಿಸಿ, ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ತಪಾಸಣೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಂಡಳಿ ಅಭಿವೃದ್ಧಿ ಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು. ಸಮಸ್ಯೆ ಪರಿಹರಿಸಲು ಎಐಟಿಯುಸಿಗೂ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದರು.

ಸಂಘದ ಅಧ್ಯಕ್ಷ ಜಿ.ಸಿ.ಸುರೇಶ್‌ಬಾಬು, ಪದಾಧಿಕಾರಿಗಳಾದ ರಾಜಪ್ಪ, ಸತ್ಯಕೀರ್ತಿ, ಮುಜೀಮಲ್, ಮಲ್ಲಪ್ಪ, ರವಿಕುಮಾರ್, ರಾಮಕೃಷ್ಣ, ಸಿ.ಶಶಿಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net