

ಚಿತ್ರದುರ್ಗ: ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದ ಕಾಲದಲ್ಲಿ ವಿವಿಧ ವಸತಿ ಯೋಜನೆಯಡಿ ಘೋಷಣೆಯಾದ ಮನೆಗಳು ಬಿಜೆಪಿ ಆಡಳಿತಾವಧಿಯಲ್ಲಿ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿವೆ. ಈ ಬಾರಿ ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಭರವಸೆ ನೀಡಿದರು.
ವಕ್ಫ್ ಮಂಡಳಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಅನ್ವರ್ ಬಾಷಾ ಅವರಿಗೆ ಜಿಲ್ಲಾ ವಕ್ಫ್ ಮಂಡಳಿಯಿಂದ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬೇರೆ ಯಾರೇ ಸಿಎಂ ಆಗಿದ್ದರೂ ಗ್ಯಾರಂಟಿಗಳ ಜಾರಿ ಸಾಧ್ಯವಾಗುತ್ತಿರಲಿಲ್ಲ. ರಾಜೀವ್‌ಗಾಂಧಿ ವಸತಿ ಯೋಜನೆಯಡಿ ನಮ್ಮ ಸರ್ಕಾರ 53 ಸಾವಿರ ಮನೆ ಹಂತ-ಹಂತವಾಗಿ ನಿರ್ಮಿಸಲು ಬದ್ಧವಿದೆ. ಇದಕ್ಕೆ ಕೇಂದ್ರ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ 3,150 ಕೋಟಿ ರೂ. ನೀಡಿದ್ದ ಅನುದಾನ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ 2 ಸಾವಿರ ಕೋಟಿ ರೂ.ಗೆ, ನಂತರ 800 ಕೋಟಿ ರೂ.ಗೆ ಇಳಿಸಿದ್ದು ಬಿಜೆಪಿ. ಪುನಃ ಕಾಂಗ್ರೆಸ್ ಬಂದ ನಂತರ ಸ್ಕಾಲರ್ ಶಿಪ್, ಶಾದಿ ಭಾಗ್ಯ ಆರಂಭವಾಗಿದೆ. ಎಂಬಿಬಿಎಸ್ ಓದುತ್ತಿರುವ 1,300 ಅಲ್ಪಸಂಖ್ಯಾತರು ವೈದ್ಯರಾಗಲೆಂದು 5 ಲಕ್ಷ ರೂ. ಸಹಾಯಧನ ನೀಡುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ನಾಲ್ಕೂವರೆ ತಿಂಗಳಲ್ಲಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಸಂತಸದ ವಿಚಾರ. ಕುಡಿಯುವ ನೀರಿಗೆ ಜಿಲ್ಲೆಯಲ್ಲೂ ಸಮಸ್ಯೆ ಇದ್ದು, ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ವಕ್ಫ್ ಮಂಡಳಿ ರಾಜ್ಯ ಅಧ್ಯಕ್ಷ ಅನ್ವರ್ ಬಾಷಾ ಮಾತನಾಡಿ, ರಾಜ್ಯದಲ್ಲೇ ಚಿತ್ರದುರ್ಗ ಅತ್ಯಂತ ಬರಪೀಡಿತ ಜಿಲ್ಲೆ. ಈ ಭಾಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕಿದೆ. ಮಂಡಳಿ ಪ್ರಗತಿಗೆ ಶ್ರಮಿಸುತ್ತೇನೆ. 8 ಕೋಟಿ ರೂ. ಅನುದಾನದಲ್ಲಿ ಜಿಲ್ಲೆಯ ಮಸೀದಿಗಳಿಗೆ ತಡೆಗೋಡೆ, ಐದು ಶಾದಿ ಮಹಲ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ವಸತಿ ಸಚಿವರು ಎಲ್ಲಾ ಸಮುದಾಯದ ವಿಶ್ವಾಸ ಗಳಿಸಿದ್ದಾರೆ. ಸಾಕಷ್ಟು ಸಮಸ್ಯೆಗಳೂ ಇವೆ. ಅವುಗಳನ್ನು ಪರಿಹರಿಸಲು ಶ್ರಮಿಸಬೇಕು. ಜಿಲ್ಲೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸುವ ಮೂಲಕ ಬಡವರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಜಮೀರ್ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು. ಈ ಕುರಿತು ಕೆಪಿಸಿಸಿ ಅಧ್ಯಕ್ಷರು ಆಸಕ್ತಿ ತೋರಬೇಕು. ಸಚಿವರು ಅತಿ ಹೆಚ್ಚು ಮನೆಗಳನ್ನು ನಿರ್ಮಿಸಿ ಬಡವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜಪೀರ್, ಕೆಪಿಸಿಸಿ ಸದಸ್ಯರಾದ ವಿಜಯಕುಮಾರ್, ಅಲ್ತಾಫ್, ಮುಖಂಡರಾದ ಜೆ.ಜೆ.ಹಟ್ಟಿ ಡಾ.ತಿಪ್ಪೇಸ್ವಾಮಿ, ಶಕೀಲ್ ನವಾಜ್, ವಕ್ಫ್ ಮಂಡಳಿ ಜಿಲ್ಲಾ ಅಧ್ಯಕ್ಷ ಇಕ್ಬಾಲ್ ಹುಸೇನ್ ಇದ್ದರು.