ವಸತಿ ಸಚಿವ ಜಮೀರ್ ಅಹಮದ್‌ಖಾನ್ ರಾಜೀನಾಮೆ ನೀಡಲಿ

nrp manavi
Published on

ಎನ್.ಆರ್.ಪುರ: ರಾಜ್ಯದಲ್ಲಿ ವಸತಿ ಯೋಜನೆಯಡಿ ನಿವೇಶನ ಹಂಚುವಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಯೇ ಸಾಕ್ಷಿ ಎಂದು ಬಿಜೆಪಿ ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್ ಹೇಳಿದರು.

ಶುಕ್ರವಾರ ಗುಬ್ಬಿಗಾ ಗ್ರಾಪಂ ಎದುರು ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಗೊತ್ತಿಲ್ಲದಂತೆ ಅವರ ವಿಧಾನಸಭಾ ಕ್ಷೇತ್ರದಲ್ಲೇ ಲಂಚ ಪಡೆದು ನಿವೇಶನ ಹಂಚಲಾಗಿದೆ. ವಸತಿಗಾಗಿ ಕಾಯುತ್ತಿರುವ ಬಡವರಿಗೆ ನಿವೇಶನ ಸಿಕ್ಕಿಲ್ಲ. ವಸತಿ ಸಚಿವರು ಖಾತೆ ನಿರ್ವಹಣೆ ಮಾಡಲು ವಿಫಲರಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಗುಬ್ಬಿಗಾ ಗ್ರಾಪಂನಲ್ಲೂ 4 ವರ್ಷಗಳಿಂದ ವಸತಿ ಯೋಜನೆಯಡಿ ಮನೆ ಮಂಜೂರಾಗಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿವೆ. ಗುಬ್ಬಿಗಾ ಗ್ರಾಪಂನ ಅರಳಿಕೊಪ್ಪ ಗ್ರಾಮದ ಸಿದ್ದನಕೊಡಿಗೆ, ಮಾವಿನ ಮನೆ, ಗದ್ದೇಮನೆ, ಸಾಲೂರು, ಕುರಕಹಳ್ಳಿ, ಮತ್ತಿಮರ, ಗುಬ್ಬಿಗಾ ಗ್ರಾಮದ ನಡುವಿನ ಮನೆ, ಕೆಳಸುತ್ತಾ, ಗುಬ್ಬಿಗಾ, ದಬ್ಬಗುಣಿ ಮುಂತಾದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸರ್ಕಾರ ದುರಸ್ತಿಗೆ ಮುಂದಾಗಿಲ್ಲ ಎಂದು ದೂರಿದರು.

ಬಿಜೆಪಿ ಮುಖಂಡ ಕೆ.ಎಂ.ಜಗದೀಶ್ ಮಾತನಾಡಿ, ಸರ್ಕಾರ ನಡೆಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಪಿಡಿಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗ್ರಾಪಂ ಸದಸ್ಯರಾದ ಜಯಂತಿ ಲೋಕೇಶ್, ಸತೀಶ್, ಗುಬ್ಬಿಗಾ ಗ್ರಾಪಂ ಮಟ್ಟದ ಅಧ್ಯಕ್ಷ ಡಿ.ಆರ್.ನಾಗರಾಜ್, ವಿಕಾಸ್, ಕಿರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net