

ಅರಸೀಕೆರೆ: ತಾಲೂಕಿನ ರಂಗಾಪುರ ಕಾವಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ ಹಬ್ಬ-2024 ಹಮ್ಮಿಕೊಳ್ಳಲಾಗಿತ್ತು.
ಮುಖ್ಯಶಿಕ್ಷಕ ಸಂತೋಷ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬೇರು ಬಲಗೊಳಿಸಲು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕಿದೆ. ಬಂದೂಕಿನ ಗುಂಡಿಗಿಂತ ಮತಪತ್ರದ ತೀರ್ಪು ದೊಡ್ಡದು ಎಂಬುದರ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಚುನಾವಣೆ ವೇಳೆ ಎಲ್ಲರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಮಾತ್ರವೇ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದರು.
ಸಹ ಶಿಕ್ಷಕರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿ ಸಂಭ್ರಮಿಸಿದರು.