ವಸತಿ ಶಾಲೆಯ ಕೌಂಪೌಂಡ್ ಕೆಡವಿದ ಕಿಡಿಗೇಡಿಗಳು

23-KGL-3,,,
Published on

ಕೊಳ್ಳೇಗಾಲ: ಪಟ್ಟಣದ ಗರ್ಲ್ಸ್ ಹೋಂ ವಸತಿ ಶಾಲೆಯ ಕೌಂಪೌಂಡ್ ಗೋಡೆಯನ್ನು ಕಿಡಿಗೇಡಿಗಳು ಕೆಡವಿದ್ದಾರೆ ಎಂದು ಗರ್ಲ್ಸ್ ಹೋಂ ಟ್ರಸ್ಟ್ ಕಾರ್ಯದರ್ಶಿ ಶುಕ್ರವಾರ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದ ಮಹದೇಶ್ವರ ಕಾಲೇಜು ರಸ್ತೆಯಲ್ಲಿರುವ ಗರ್ಲ್ಸ್ ಹೋಂ ವಸತಿ ಶಾಲೆಯಲ್ಲಿ ಸುಮಾರು 40 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಸತಿನಿಲಯದ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕೌಂಪೌಡ್‌ಗೆ ಅಪರಿಚಿತರು ಹಾನಿಗೊಳಿಸಿದ್ದರು. ಬಳಿಕ ಪುನರ್ ನಿರ್ಮಾಣ ಮಾಡಲಾಗಿತ್ತು. ಆದರೀಗ ಗುರುವಾರ ರಾತ್ರಿ ಮತ್ತೆ ಗೋಡೆಯನ್ನು ಕೆಡವಿರುವುದು ವಿದ್ಯಾರ್ಥಿನಿಯರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ, ವಿದ್ಯಾರ್ಥಿನಿಯರು ಇರುವ ಕೊಠಡಿಗಳ ಬಾಗಿಲನ್ನು ಮಧ್ಯರಾತ್ರಿ ತಟ್ಟುವ ಶಬ್ಧ ಕೇಳಿಸುತ್ತದೆ. ಆವರಣದಲ್ಲಿರುವ ಮರಗಳ ಕಳವು ಮಾಡಲಾಗುತ್ತಿದೆ ಎಂದು ದೂರು ಕೇಳಿಬಂದಿದೆ.

ಈ ಹಿನ್ನಲೆ ಸೂಕ್ತ ರಕ್ಷಣೆಗಾಗಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗರ್ಲ್ಸ್ ಹೋಂ ಟ್ರಸ್ಟ್ ಕಾರ್ಯದರ್ಶಿ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net