ವಸತಿ ಶಾಲೆಗಳ ಮೂಲಸೌಕರ್ಯಕ್ಕೆ ಒತ್ತು

Published on

ಚಾಮರಾಜನಗರ: ಚಾ.ನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳು ಮತ್ತು ವಸತಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.

ನಗರದ ಹೊರವಲಯದ ಮಲ್ಲಯ್ಯನಪುರ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲಾವರಣದಲ್ಲಿ 53.38 ಲಕ್ಷ ರೂ. ವೆಚ್ಚದ ಶಾಲೆಯ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಶಿಕ್ಷಣವೊಂದೇ ಆಧಾರವಾಗಿದ್ದು, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಮಕ್ಕಳ ಶಿಕ್ಷಣಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ವಿದ್ಯಾರ್ಥಿಗಳು ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಪ್ರಸ್ತುತ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಭದ್ರತೆಗೆ ಸುತ್ತುಗೋಡೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಗುತ್ತಿಗೆದಾರರು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಎಇಇ ಮಂಜುನಾಯಕ್, ಮುಖಂಡ ಸಮೀಉಲ್ಲಾ, ಗುತ್ತಿಗೆದಾರ ಅಶೋಕ್ ವಿನೋದ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net