

ಚಾಮರಾಜನಗರ: 2025-26ನೇ ಸಾಲಿಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಜಿಬಿವಿ ವಸತಿ ಶಾಲೆ, ಕೆಕೆಜಿಬಿವಿ ವಸತಿ ಶಾಲೆಗಳ ಪ್ರವೇಶಕ್ಕಾಗಿ ಆನ್‌ಲೈನ್ ಹಾಗೂ ಆ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ಉಚಿತವಾಗಿ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಯಳಂದೂರು ತಾಲೂಕಿನ ಕೆಜಿಬಿವಿ ಟೈಪ್-1 ವಸತಿ ಶಾಲೆಗೆ 6 ರಿಂದ 8ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.
ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನ ಮೆಲ್ಲಹಳ್ಳಿಯ ಕೆಜಿಬಿವಿ ಟೈಪ್-4 ವಸತಿ ನಿಲಯಗಳಲ್ಲಿ 9 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಕೆಕೆಜಿಬಿವಿ ವಸತಿ ನಿಲಯಗಳಿಗೆ 6 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.
ಸದರಿ ವಸತಿ ನಿಲಯಗಳ ವಿದ್ಯಾರ್ಥಿನಿಯರ ದಾಖಲಾತಿ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ, ಮೈನಾರಿಟಿ ವರ್ಗಗಳಿಂದ ಶೇ.75ರಷ್ಟು ಮತ್ತು ಬಿಪಿಎಲ್ ವರ್ಗದಿಂದ ಶೇ.25ರಷ್ಟು ದಾಖಲಾತಿ ಮಾಡಿಕೊಳ್ಳಲಾಗುವುದು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ವಿದ್ಯಾರ್ಥಿನಿಯರನ್ನು ಗಣನೆಗೆ ತೆಗೆದುಕೊಂಡು ದಾಖಲು ಮಾಡಿಕೊಳ್ಳಲಾಗುವುದು. ಅನಾಥ ಮಕ್ಕಳು, ತಂದೆ ತಾಯಿ ಇಲ್ಲದ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಪ್ರತಿ ವಸತಿ ಶಾಲೆ ಅಥವಾ ನಿಲಯಕ್ಕೆ 100 ವಿದ್ಯಾರ್ಥಿನಿಯರ ದಾಖಲಾತಿಗೆ ಅವಕಾಶವಿರುತ್ತದೆ.
ವಸತಿ ಶಾಲೆಯಲ್ಲಿನ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಬೋಧನೆಯ ಜತೆಗೆ ವೃತ್ತಿಕೌಶಲ ತರಬೇತಿಯನ್ನು ನೀಡಲಾಗುವುದು. ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ನುರಿತ ವೈದ್ಯರಿಂದ ಪ್ರತಿ 3 ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡುವುದರ ಜತೆಗೆ ದೈನಂದಿನ ಬಳಕೆಯ ವಸ್ತುಗಳನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ವಸತಿ ಶಾಲೆ ನಿಲಯಗಳಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆ್ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿಗಳನ್ನು ಮೇ 25ರೊಳಗೆ ಸಲ್ಲಿಸಬೇಕು. ದಾಖಲಾಗಲು ಆಸಕ್ತಿ ಇರುವ ವಿದ್ಯಾರ್ಥಿನಿಯರು, ಪಾಲಕರು ಸಂಬಂಧಿಸಿದ ವಸತಿ ಶಾಲೆ, ವಸತಿ ನಿಲಯಗಳ ಮುಖ್ಯ ಶಿಕ್ಷಕರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಬಿಆರ್‌ಪಿ ಮತ್ತು ಸಿಆರ್‌ಪಿಯವರನ್ನು ಸಂಪರ್ಕಿಸಿ ಪ್ರವೇಶ ಪಡೆಯುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.