ವಸತಿ ಯೋಜನೆ ಕಾಮಗಾರಿ ಅರ್ಧಂಬರ್ಧ

22CBP2DISHAMeeting
Published on

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಸೇರಿ ವಿವಿಧ ವಸತಿ ಯೋಜನೆಗಳಡಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಬಿಡುಗಡೆಗೆ ಒತ್ತಾಯಿಸಿ, ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ ಸಭೆ) ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸಂಸದ ಬಿ.ಎನ್.ಬಚ್ಚೇಗೌಡ ಅಧ್ಯಕ್ಷತೆಯ ಸಭೆಯಲ್ಲಿ ಸಮಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ವಸತಿ ಯೋಜನೆಗೆ ಬಾಕಿ ಹಣ, ಕಾಮಗಾರಿ ಸ್ಥಗಿತ, ಲಾನುಭವಿಗಳ ಆಕ್ರೋಶದ ವಿಚಾರಗಳನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳಲ್ಲಿ 18 ಸಾವಿರ ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅನುದಾನವಿಲ್ಲದೆ ಬಹುತೇಕ ಕಡೆಗಳಲ್ಲಿ ಪಾಯ, ಗೋಡೆ ಮತ್ತು ಛಾವಣಿಯ ಹಂತದಲ್ಲೇ ಕಾಮಗಾರಿ ನಿಂತಿವೆ ಎಂಬ ಅಳಲು ಸಾಮೂಹಿಕವಾಗಿ ಕೇಳಿ ಬಂದಿದ್ದರಿಂದ ಸರ್ಕಾರಕ್ಕೆ ಪತ್ರ ಬರೆಯುವ ತೀರ್ಮಾನಕ್ಕೆ ಬರಲಾಯಿತು.

ನರೇಗಾ ಯೋಜನೆಯಡಿ 2019-20ನೇ ಸಾಲಿನಲ್ಲಿ 30 ಲಕ್ಷ ಮಾನವ ದಿನಗೂಲಿ ಗುರಿ ಪೈಕಿ 37.14 ಲಕ್ಷ ಮಾನವ ದಿನಗೂಲಿ, 2020-21ನೇ ಸಾಲಿನಲ್ಲಿ 38 ಲಕ್ಷ ಮಾನವ ದಿನಗೂಲಿ ಪೈಕಿ ಈಗಾಗಲೇ 46 ಲಕ್ಷ ಮಾನವ ದಿನಗೂಲಿ ಸೃಜಿಸಲಾಗಿದ್ದು, ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಪಂ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ (ಪಿಎಂಜಿಎಸ್‌ವೈ) 2018-19ಸೇ ಸಾಲಿನಲ್ಲಿ 28 ರಸ್ತೆಗಳ 113.66 ಕಿ.ಮೀ ನವೀಕರಣಕ್ಕೆ ಮಂಜೂರಾತಿ ಸಿಕ್ಕಿದ್ದು ಈ ಪೈಕಿ 22 ಪೂರ್ಣಗೊಂಡಿವೆ. ಪ್ರಸಕ್ತ ಸಾಲಿನಲ್ಲಿ 157.79 ಕಿ.ಮೀ ಉದ್ದದ 17 ರಸ್ತೆಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು 6 ರಸ್ತೆಗಳ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಕಾರ್ಯಪಾಲಕ ಅಭಿಯಂತ ಗುಂಡಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆವೈ)ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 3,79,380 ಕ್ವಿಂಟಾಲ್ ಅಕ್ಕಿ, 9,292 ಕ್ವಿಂಟಾಲ್ ತೊಗರಿಬೇಳೆ, 15,471 ಕ್ವಿಂಟಾಲ್ ಕಡಲೇಕಾಳು ವಿತರಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಸವಿತಾ ತಿಳಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಸರಸ್ವತಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net