

ಚಾಮರಾಜನಗರ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಬಂಡಳ್ಳಿ ಗ್ರಾಮದಲ್ಲಿ ಮಂಜೂರಾಗಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ಹನೂರಿಗೆ ವರ್ಗಾಹಿಸಲು ಚಿಂತನೆ ನಡೆಸಿದ್ದು, ಬಂಡಳ್ಳಿಯಲ್ಲೇ ಉಳಿಸಬೇಕು ಎಂದು ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಆಗ್ರಹಿಸಿದರು.
ಹನೂರು ತಾಲೂಕಿನ ಬಂಡಹಳ್ಳಿ, ಮಣಗಳ್ಳಿ, ಶಾಗ್ಯ, ತೆಳ್ಳನೂರು, ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಂಡಳ್ಳಿ ಗ್ರಾಮದಲ್ಲಿ ಸುಮಾರು 4.5 ಕೋಟಿ ರೂ, ವೆಚ್ಚದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಾಣ ಮಾಡುತ್ತಿರುವ ವಿದ್ಯಾರ್ಥಿ ನಿಲಯವನ್ನು ಯಾವುದೇ ಕಾರಣಕ್ಕೂ ಬೇರೆಡೆ ಸ್ಥಳಾಂತರಿಸಬಾರದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಂಡಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 153 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ವರ್ಗಗಳು ಹಾಗೂ ಆದಿವಾಸಿ ಜನಾಂಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಇಲ್ಲೇ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವುದರಿಂದ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬಂಡಳ್ಳಿಗೆ ಮಂಜೂರಾಗಿರುವ ವಿದ್ಯಾರ್ಥಿ ನಿಲಯವನ್ನು ಇಲ್ಲೇ ಪ್ರಾರಂಭಿಸಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಆದಿವಾಸಿ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಕೆ.ಪ್ರವೀಣ್, ಮೆಂದಾರೆ ಮಾದಯ್ಯ, ಮಹದೇಶ್ವರ ಬೆಟ್ಟದ ಮಾದೇವ, ಚಿಕ್ಕಮಾದ ಹಾಜರಿದ್ದರು.