

ಬೆಳಗಾವಿ: ವಿಶ್ವವಿದ್ಯಾಲಯಗಳು ಜರುಗಿಸುತ್ತಿರುವ ಪದವಿ ಪರೀಕ್ಷೆಗಳಿಗೆ ಹಾಜರಾಗಲು ಬರುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರವು ಶಾಲಾ-ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಿದೆ. ಮತ್ತೊಂದೆಡೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇಂತಹ ಸಂದರ್ಭದಲ್ಲಿ ವಿಶ್ವ ವಿದ್ಯಾಲಯಗಳು ಪದವಿ ಪರೀಕ್ಷೆಗಳನ್ನು ನಡೆಸುತ್ತಿವೆ. ಅಲ್ಲದೆ, ವಸತಿ ನಿಲಯಗಳ ಮೇಲ್ವಿಚಾರಕರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಜಿಲ್ಲಾಡಳಿತವು ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಕೆಲ ವಿಶ್ವವಿದ್ಯಾಲಯಗಳು ಏ. 27ರಿಂದಲೇ ವಿವಿಧ ಪದವಿ ಪರೀಕ್ಷೆಗಳನ್ನು ನಡೆಸುವುದಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿವೆ. ಮತ್ತೊಂದೆಡೆ, ಕೋವಿಡ್-19 ನೆಪದಲ್ಲಿ ವಸತಿ ನಿಲಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ. ಇದರಿಂದಾಗಿ ನಮಗೆ ದಿಕ್ಕು ತೋಚದಾಗಿದೆ. ಜಿಲ್ಲಾಡಳಿತ ಕೂಡಲೇ ವಸತಿ ನಿಲಯ ಆರಂಭಿಸಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ರೋಹಿತ್ ಉಮನಾಬಾದಿಮಠ, ಕಿರಣ ದುಖಾಂದಾರ, ರವಿ ಇದ್ದರು.