ವಸತಿ ನಂಬಿ ಗುಡಿಸಲು ಕಿತ್ತುಹಾಕಿದ ಬಡವರು : ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡುವಂತೆ ಸಿಪಿವೈ ಮನವಿ

22
Published on

ಚನ್ನಪಟ್ಟಣ: ತಾಲೂಕಿಗೆ ವಿಶೇಷ ಯೋಜನೆಯಡಿ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ವಸತಿ ಸಚಿವ ಸೋಮಣ್ಣಗೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ವಸತಿ ಸಚಿವರ ನೇತೃತ್ವದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿ, ತಾಲೂಕಿಗೆ ವಸತಿ ಯೋಜನೆಯಲ್ಲಿ ಕಳೆದ 4 ವರ್ಷಗಳಿಂದ ಸಮರ್ಪಕ ಮನೆಗಳು ದೊರೆತಿಲ್ಲ. ಬಡ, ರೈತಾಪಿ ವರ್ಗ ಕಂಗಾಲಾಗಿದ್ದು, ವಸತಿ ಯೋಜನೆಯನ್ನು ನಂಬಿ ನೆಲೆ ಕಂಡುಕೊಂಡಿದ್ದ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ. ಅರ್ಹರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹೆಚ್ಚುವರಿ ಮನೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕೆಎಚ್‌ಬಿ ಬಡಾವಣೆ ಬಗ್ಗೆ ಚರ್ಚೆ: ನಗರದ ಕೆಎಚ್‌ಬಿ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿ ಇಲ್ಲಿಯವರೆಗೆ ಆಗಿರುವ ಮತ್ತು ಆಗಬೇಕಿರುವ ಕಾರ್ಯಗಳ ಬಗ್ಗೆ ಸಿಪಿವೈ ಸಚಿವರ ಗಮನ ಸೆಳೆದರು. ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸಿದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಗೃಹ ಮಂಡಳಿಯಿಂದ ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಕೆಎಚ್‌ಬಿ ವತಿಯಿಂದ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು.

ತಗಚಗೆರೆ ಸರ್ವೇ ನಂ.207 ರ ಭೂಸ್ವಾಧೀನ ಕುರಿತು ಚರ್ಚೆ ನಡೆಯಿತು. ನಗರದ 31ನೇ ವಾರ್ಡ್ ಮತ್ತು ಕೆಎಚ್‌ಬಿ ಬಡಾವಣೆಗಳಿಗೆ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕೆಲಸವಾಗಬೇಕು ಎಂದು 31ನೇ ವಾರ್ಡ್ ಸದಸ್ಯೆ ಮಂಗಳಮ್ಮ ಮನವಿ ಬಗ್ಗೆಯೂ ಸಿಪಿವೈ ಸಚಿವ ಜತೆ ಚರ್ಚಿಸಿದರು. ಸಭೆಯಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net