

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಪೌರ ಕಾರ್ವಿುಕರ ಗೃಹಭಾಗ್ಯ ಯೋಜನೆಯಡಿ ನಗರದ ಮಂಟೂರ ರಸ್ತೆಯಲ್ಲಿ ನಿರ್ವಿುಸುತ್ತಿರುವ ವಸತಿ ಗೃಹಗಳನ್ನು ಮಾರ್ಚ್ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪಾಲಿಕೆಯ 26 ಕೋಟಿ ರೂ. ಅನುದಾನದಲ್ಲಿ ಪೌರ ಕಾರ್ವಿುಕರಿಗೆ 320 ಮನೆಗಳನ್ನು ನಿರ್ವಿುಸಲಾಗುತ್ತಿದೆ. ಇವುಗಳಲ್ಲಿ 224 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯ 2ನೇ ಹಂತದಲ್ಲಿ ಪಾಲಿಕೆ 152 ಕೋಟಿ ರೂ. ಮಂಜೂರಾಗಿದ್ದು, ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ಪ್ರಗತಿಯಲ್ಲಿದೆ. 15 ಕೋಟಿ ರೂ. ಎಸ್ಎಫ್ಸಿ, 82 ಕೋಟಿ ರೂ. ಸಾಮಾನ್ಯ ನಿಧಿಯಡಿ ಅವಳಿ ನಗರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಚಂದ್ರಿಕಾ ಮೇಸ್ತ್ರಿ, ಪೂಜಾ ಶೇಜವಾಡಕರ, ನಜೀರ ಅಹ್ಮದ್ ಹೊನ್ಯಾಳ, ಹುಸೇನಬೀ ನಾಲವತ್ತವಾಡ, ಮೀನಾಕ್ಷಿ ವಂಟಮುರಿ, ಪಾಲಿಕೆ ಉಪ ಆಯುಕ್ತ ಆರ್. ವಿಜಯಕುಮಾರ, ಮುಖ್ಯ ಲೆಕ್ಕಾಧಿಕಾರಿ ಪಿ.ಬಿ. ವಿಶ್ವನಾಥ, ಸಹಾಯಕ ಆಯುಕ್ತ ಗಿರೀಶ ತಳವಾರ ಇತರರು ಇದ್ದರು.
ಮೇಯರ್ ಧ್ವಜಾರೋಹಣ
ಇಲ್ಲಿಯ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮೇಯರ್ ರಾಮಪ್ಪ ಬಡಿಗೇರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಉತ್ತಮ ರಸ್ತೆ, ಗಟಾರ, ಉದ್ಯಾನ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಸುಂದರ ನಗರ ನಿರ್ವಣಕ್ಕೆ ನಾಗರಿಕರು ಸಹಕಾರ ನೀಡಬೇಕೆಂದು ಕೋರಿದರು.
ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಸಹಾಯಕ ಆಯುಕ್ತ ರಮೇಶ ನೂಲ್ವಿ, ಎಇಆರ್ಒ ಉಮೇಶ ಸವಣೂರ, ಪರಿಸರ ಇಂಜಿನಿಯರ್ ಟಿ.ಎನ್. ಶ್ರೀಧರ, ಪದ್ಮಾವತಿ ತಂಬಿಗೆ, ಇತರರಿಗೆ 2024-25ರಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.