ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯ ನೆರವು

hnl dgs sep 2
Published on

ಹೊನ್ನಾಳಿ: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪೋಷಕರು ಸಾಕಷ್ಟು ಪ್ರಯತ್ನಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಬಿಆರ್‌ಸಿ ಕಚೇರಿ ಆವರಣದಲ್ಲಿ ಶನಿವಾರ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿವಿಧ ಸಾಧನ, ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ಪರಿಕರ ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕೂಲವಾಗಲಿ ಎಂದು ವೈದ್ಯರ ಸಲಹೆ ಮೇರೆಗೆ ವ್ಹೀಲ್‌ಚೇರ್, ಊರುಗೋಲು, ಶ್ರವಣ ಸಾಧನ ಸೇರಿದಂತೆ ವಿವಿಧ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ ಧೈರ್ಯದಿಂದ ಮುನ್ನಡೆಯಬೇಕು ಎಂದರು.

41 ಮಕ್ಕಳಿಗೆ ವಿವಿಧ ಸಾಧನ, ಸಲಕರಣೆ ನೀಡಲಾಗುತ್ತಿದ್ದು, ಇವುಗಳ ಸದುಪಯೋಗ ಮಾಡಿಕೊಂಡು ಶಾಲೆಗಳಿಗೆ ತಪ್ಪದೇ ತಮ್ಮ ಮಕ್ಕಳನ್ನು ಕಳುಹಿಸಿಕೊಡಬೇಕು ಎಂದು ಹೇಳಿದರು.

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪೋಷಣೆ ನಿರಂತರವಾಗಿದ್ದು ಪೋಷಕರು ದುಃಖಪಡದೆ ತಮ್ಮ ಮಕ್ಕಳನ್ನು ಪೋಷಿಸಬೇಕಿದೆ. ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬಾರದು ಎಂದರು.

ಎಸ್‌ಪಿಡಿ ರಾಜ್ಯ ಯೋಜನಾಧಿಕಾರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಹೇಮಾವತಿ ಮಾತನಾಡಿ, ದೈಹಿಕ ಅಂಗವಿಕಲತೆ ಶಾಪವೆಂದುಕೊಳ್ಳದೆ ವರ ಎಂದು ಭಾವಿಸಿ ಪೋಷಕರು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಬಿಇಒ ನಂಜರಾಜ್ ಮಾತನಾಡಿ, ಅಗತ್ಯ ತರಬೇತಿಗಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಿದರೆ ಅವರು ದೊಡ್ಡ ಸಾಧನೆ ಮಾಡಬಲ್ಲರು ಎಂಬುದು ಅನೇಕ ಸಾಧಕರಿಂದ ಈಗಾಗಲೇ ದಾಖಲೆಗಳಿಂದ ವ್ಯಕ್ತವಾಗಿದೆ. ಪೋಷಕರು ಧೃತಿಗೆಡದೆ ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಬಿಆರ್‌ಸಿ ತಿಪ್ಪೇಶಪ್ಪ ಮಾತನಾಡಿದರು. ಎಪಿಸಿ ಸಂಜೀವಮೂರ್ತಿ, ಯೋಗೇಶ್ವರಯ್ಯ, ಇಸಿಒ ಮುದ್ದನಗೌಡ ಹಾಗೂ ಇತರ ಅಧಿಕಾರಿಗಳು ಇದ್ದರು.

ಎಚ್‌ಎನ್‌ಎಲ್ ಡಿಜಿಎಸ್ ಸೆ 2 :
ಹೊನ್ನಾಳಿ ಪಟ್ಟಣದ ಬಿಆರ್‌ಸಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿವಿಧ ಸಲಕರಣೆ ವಿತರಿಸಿದರು. ಎಪಿಸಿ ಸಂಜೀವಮೂರ್ತಿ, ಯೋಗೇಶ್ವರಯ್ಯ, ಇಸಿಒ ಮುದ್ದನಗೌಡ ಹಾಗೂ ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net