ವಲ್ಲ್ಯಾಪುರೆ ಪರ ಬ್ಯಾಟಿಂಗ್

Valyapure 01
Published on


ಜಯತೀರ್ಥ ಪಾಟೀಲ ಕಲಬುರಗಿ
ಜೂನ್ 30ರಂದು ತೆರವಾಗುತ್ತಿರುವ ವಿಧಾನ ಪರಿಷತ್ನ 12 ಸ್ಥಾನಗಳಲ್ಲಿ ತನ್ನ ಪಾಲಿನ 9ರಲ್ಲಿ ಕೆಲವನ್ನು ಸರ್ಕಾರ ರಚನೆಗೆ ಕಾರಣವಾಗಿರುವವರಿಗೆ ಬಿಟ್ಟುಕೊಟ್ಟು ಮೇಲ್ಮನೆ ಪ್ರವೇಶಿಸುವಂತೆ ಮಾಡಲು ಬಿಜೆಪಿ ಯೋಜನೆ ರೂಪಿಸಲು ಮುಂದಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ಗೆ ತಲಾ 3 ಸ್ಥಾನ ಸಿಗಲಿವೆ.
ಬಿಜೆಪಿ ಪಾಲಿನ 9 ಸ್ಥಾನಗಳ ಪೈಕಿ 5 ನೇಮಕ ಆಧಾರದ ಮೇಲೆ ನಡೆದರೆ, ವಿಧಾನಸಭೆಯಿಂದ ಮೇಲ್ಮನೆಗೆ 4 ಸ್ಥಾನಗಳ ಚುನಾವಣೆ ನಡೆಯಬೇಕಿದೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾದ ಮತ್ತು ಪಕ್ಷಕ್ಕೆ ಆಪದ್ಭಾಂಧವ ಎನಿಸಿದವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಬಿಜೆಪಿ ಮೇಲಿದೆ.
ಕಲಬುರಗಿ ಜಿಲ್ಲೆಯಲ್ಲಿ ತಿಪ್ಪಣ್ಣಪ್ಪ ಕಮಕನೂರ, ಇಕ್ಬಾಲ್ ಅಹ್ಮದ್ ಸರಡಗಿ ಅವಧಿ ಮುಗಿಯಲಿದೆ. ಈ ಪೈಕಿ ಜಿಲ್ಲಾ ಬಿಜೆಪಿಯ ಒಬ್ಬರನ್ನಾದರೂ ನೇಮಕ ಮಾಡಬೇಕು ಎಂಬುದು ಆ ಪಕ್ಷದ ಒಲವು.

ಪೈಪೋಟಿ ಶುರು: ಪರಿಷತ್ನ 5 ಸ್ಥಾನಗಳಿಗೆ ಭರ್ಜರಿ ಪೈಪೋಟಿ ಶುರುವಾಗಿದೆ. ಆಪರೇಷನ್ ಕಮಲ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ ಸಚಿವ ಸ್ಥಾನದಿಂದ ವಂಚಿತ ಎಂಟಿಬಿ ನಾಗರಾಜ್, ಶಂಕರ್, ಎಚ್.ವಿಶ್ವನಾಥ್ ಹೆಸರು ಮುಂಚೂಣಿಯಲ್ಲಿವೆ. ಜತೆಗೆ ನಟಿ ಮಾಳವಿಕಾ, ನಟ ಜಗ್ಗೇಶ್ ಹೆಸರೂ ಕೇಳಿಬರುತ್ತಿವೆ. ನಾಗರಾಜ್, ಶಂಕರ್ ಮತ್ತು ವಿಶ್ವನಾಥ್ ಅವರಿಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ವಲ್ಲ್ಯಾಪುರೆಗೆ ಸಿಎಂ ಅಭಯ: ಮಾಜಿ ಸಚಿವರೂ ಆದ ಸಿಎಂ ಬಿ.ಎಸ್. ಯಡಿಯೂರಪ್ಪ ಕಟ್ಟಾ ಬೆಂಬಲಿಗ ಸುನೀಲ್ ವಲ್ಲ್ಯಾಪುರೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಚಿಂಚೋಳಿ ಮೀಸಲು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಎಸ್ವೈ ಸಾರ್ವಜನಿಕ ಸಮಾರಂಭವೊಂದರಲ್ಲಿ ವಲ್ಲ್ಯಾಪುರೆ ಅವರನ್ನು ಮೇಲ್ಮನೆಗೆ ನೇಮಿಸಿ ಉತ್ತಮ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಚುನಾವಣಾ ಉಸ್ತುವಾರಿ ಆಗಿದ್ದ (ಈಗ ಸಚಿವ) ವಿ.ಸೋಮಣ್ಣ ಸಹ ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುವ ವಲ್ಲ್ಯಾಪುರೆ ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುವುದು ಖಚಿತ ಎಂದಿದ್ದರು.

ಬಿಜೆಪಿ ಜಿಲ್ಲಾ ಘಟಕ ಬೆಂಬಲ: ಬಿಜೆಪಿ ಕಲಬುರಗಿ ಜಿಲ್ಲಾ ಘಟಕ ಸುನೀಲ್ ವಲ್ಲ್ಯಾಪುರೆ ಅವರ ಏಕೈಕ ಹೆಸರು ಪ್ರಸ್ತಾಪಿಸಿದೆ. ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಿ.ಜಿ. ಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ, ಸುಭಾಷ ಗುತ್ತೇದಾರ್, ಬಸವರಾಜ ಮತ್ತಿಮೂಡ, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಶಶೀಲ್ ನಮೋಶಿ ಇತರ ನಾಯಕರನ್ನು ಒಳಗೊಂಡ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಲ್ಲ್ಯಾಪುರೆ ಪರ ಬ್ಯಾಟ್ ಬೀಸಿದ್ದಾರೆ. ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯ ತೊಡಗಿಸಿಕೊಂಡಿರುವ ಅವರು, ಚಿಂಚೋಳಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣರೂ ಆಗಿದ್ದಾರೆ. ಹೀಗಾಗಿ ಸುನೀಲ್ ಅವರನ್ನು ಮೇಲ್ಮನೆಗೆ ನೇಮಕ ಮಾಡಲೇಬೇಕೆಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ, ಪ್ರಲ್ಹಾದ್ ಜೋಶಿ ಇತರರನ್ನು ಒಳಗೊಂಡಿದ್ದ ರಾಜ್ಯ ಕೋರ್ ಕಮಿಟಿಯಲ್ಲೂ ವಲಾ್ಲೃಪುರೆ ಹೆಸರು ಪ್ರಸ್ತಾಪವಾಗಿ ನ್ಯಾಯ ಒದಗಿಸಬೇಕೆಂಬ ಮಾತು ಕೇಳಿಬಂದಿದೆ.

ತೆರೆಮರೆ ಕಸರತ್ತು: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೆಸರೂ ಕೇಳಿಬರುತ್ತಿದೆ. ಕಲಬುರಗಿ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯೊಂದಿಗೆ ನಿಂತು ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಮೂಲಕ ರಾಜ್ಯ ನಾಯಕರ ಗಮನ ಸೆಳೆದಿದ್ದಾರೆ. ಜತೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಮುಖಂಡ ಶರಣಪ್ಪ ತಳವಾರ ಸಹ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net