ವಲಸೆ ಕಾರ್ವಿುಕರಿಗೆ ಸಕಲ ಸೌಲಭ್ಯ

14 vikram 9
Published on

ಧಾರವಾಡ: ನೆರೆ ರಾಜ್ಯಗಳಿಗೆ ವಲಸೆ ಹೋಗಿರುವ ರಾಜ್ಯದ ಕಾರ್ವಿುಕರಿಗೆ ಅವರು ಈಗ ಇರುವಲ್ಲೇ ಊಟ,ವಸತಿ, ಬಟ್ಟೆ, ವೈದ್ಯಕೀಯ ಉಪಚಾರ ಸೇರಿ ಎಲ್ಲ ಸೌಕರ್ಯ ಸಿಗುವಂತೆ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಸಂರ್ಪಸಿ ಸೂಕ್ತ ಏರ್ಪಾಡು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಾಕ್​ಡೌನ್ ಜಾರಿ, ವೈದ್ಯಕೀಯ ಚಿಕಿತ್ಸೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಏ. 21ರವರೆಗೆ ಕೆಎಂಎಫ್​ನಿಂದ ಉಚಿತ ಹಾಲು ವಿತರಣೆ ನಡೆಯಲಿದೆ ಎಂದರು.

ಆಹಾರ ಧಾನ್ಯಗಳು, ಆಹಾರದ ಬೇಡಿಕೆ ಇರುವ ಸ್ಥಳಗಳನ್ನು ಆದ್ಯತಾವಾರು ಪಟ್ಟಿ ಮಾಡಿ ಜನರಿಂದ ಸಂಗ್ರಹವಾದ ಧಾನ್ಯಗಳು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು. ಯಾವ ಸ್ಥಳಗಳಲ್ಲಿ ವಿತರಣೆಯಾಗಿದೆ, ಯಾವ ಸ್ಥಳಗಳನ್ನು ತಲುಪಬೇಕಿದೆ ಎಂಬ ಮಾಹಿತಿಯನ್ನು ನಿತ್ಯ ಸಿದ್ಧಪಡಿಸಿ ಚುನಾಯಿತ ಪ್ರತಿನಿಧಿಗಳಿಗೂ ನೀಡಿದರೆ, ಸೌಲಭ್ಯಗಳು ದೊರೆಯದ ಜನರಿಗೆ ಆಹಾರ ಧಾನ್ಯ ಪೂರೈಸಲು ಸಾಧ್ಯವಾಗುತ್ತದೆ ಎಂದರು.

ಕೆಲ ಖಾಸಗಿ ಆಸ್ಪತ್ರೆಗಳು ಸೇವೆ ಆರಂಭಿಸಿಲ್ಲ ಎಂಬ ದೂರುಗಳು ಬರುತ್ತಿವೆ. ಕೆಪಿಎಂಇ ನೋಂದಾಯಿತ ವೈದ್ಯರನ್ನು ಸಂರ್ಪಸಿ ಸೇವೆ ಪುನರಾರಂಭಿಸಲು ಸೂಚಿಸಬೇಕು. ಆಯುಷ್ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸಲಹೆಗಳನ್ನು ಸಂಬಂಧಿಸಿದ ಇಲಾಖೆ ಮತ್ತು ಆಯುಷ್ ವೈದ್ಯರು ಅನುಷ್ಠಾನ ಮಾಡಬೇಕು. ಜಿಲ್ಲೆಯಲ್ಲಿ ನಿರೀಕ್ಷಿತ ಅಂದಾಜು ಪ್ರಕಾರ ಕರೊನಾ ಚಿಕಿತ್ಸೆಗೆ ವೈದ್ಯಕೀಯ ಉಪಕರಣಗಳ ಕೊರತೆಯಾಗಬಾರದು. ವೈದ್ಯರು, ನರ್ಸ್​ಗಳು, ಸಹಾಯಕ ಸಿಬ್ಬಂದಿ ಸೇರಿ ಪೌರಕಾರ್ವಿುಕರು, ಪೊಲೀಸರು ಅಗತ್ಯ ಸೇವೆಯಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಿತರಕ್ಷಣೆಗೂ ಕಾಳಜಿ ವಹಿಸಬೇಕು ಎಂದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ತಮ್ಮ ಕ್ಷೇತ್ರದ ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದರು. ಸ್ಥಳಿಯವಾಗಿಯೇ ವಿತರಣೆ ಸೌಕರ್ಯ ಇಲ್ಲದ ಶಿಶುವಿನಹಳ್ಳಿ, ಶಿರೂರ, ಮಂಟೂರ, ನಾಗರಹಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ಲಾಕ್​ಡೌನ್ ಅವಧಿಯಲ್ಲಿ ಪಡಿತರ ಚೀಟಿದಾರರ ಮನೆಗಳಿಗೆ ಆಹಾರ ಧಾನ್ಯ ಪೂರೈಸುವ ವ್ಯವಸ್ಥೆ ಮಾಡಬೇಕು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹುಬ್ಬಳ್ಳಿಯ ಬಿಡ್ನಾಳ, ಗಬ್ಬೂರ, ವೀರಾಪುರ ಓಣಿ ಮೊದಲಾದ ಸ್ಥಳಗಳಿಂದ ಕೃಷಿಕರು ತಮ್ಮ ಹೊಲಗಳಿಗೆ ಅಗತ್ಯ ಕಾರ್ಯಕ್ಕೆ ತೆರಳಲು ಪೊಲೀಸರು ಅವಕಾಶ ನೀಡಬೇಕು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಪಾಸಿಟಿವ್ ವರದಿ ಬಂದಿರುವ ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಗುರುತಿಸಲಾಗಿದೆ. ಪ್ರಥಮ ಸಂಪರ್ಕ ಹೊಂದಿದವರನ್ನು ಸರ್ಕಾರಿ ಕ್ವಾರಂಟೈನ್, ಸೆಕೆಂಡರಿ ಸಂಪರ್ಕ ಹೊಂದಿರುವವರನ್ನು ಮನೆಗಳಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಪಾಸಿಟಿವ್ ವ್ಯಕ್ತಿಗಳ ಸಂರ್ಪತರು ಹಾಗೂ ತೀವ್ರ ಉಸಿರಾಟದ ತೊಂದರೆ, ನ್ಯುಮೋನಿಯಾ ಲಕ್ಷಣಗಳಿರುವವರನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.

ಕರೊನಾ ಪಾಸಿಟಿವ್ ಸಂಪರ್ಕ ಹೊಂದಿದ ವ್ಯಕ್ತಿಗಳು ಮತ್ತು ತಬ್ಲಿಘಿ ಜಮಾತ್​ನಿಂದ ಬಂದಿರುವವರನ್ನು ಸರ್ಕಾರದ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಖಾಸಗಿ ಆಯುಷ್ ವೈದ್ಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಇತರ ವೈದ್ಯರಿಗೂ ಆದರ್ಶವಾಗಿದೆ ಎಂದರು.

ಪೊಲೀಸ್ ಆಯುಕ್ತ ಆರ್. ದೀಲಿಪ್ ಮಾತನಾಡಿ, ಔಷಧಿ ತರುವ ನೆಪದಲ್ಲಿ ಅನವಶ್ಯಕವಾಗಿ ಓಡಾಡುವ ಜನರನ್ನು ನಿರ್ಬಂಧಿಸಲಾಗುತ್ತಿದೆ. ಎಪಿಎಂಸಿ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ ಎಂದರು. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್ಸ್​ನ ಕೋವಿಡ್ ಪ್ರಯೋಗಾಲಯದಲ್ಲಿ ನಿತ್ಯ 40-50 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಈವರೆಗೆ 220ರಷ್ಟು ಜನರ ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಆರ್​ಎನ್​ಎ ಎಕ್ಸ್​ಟ್ರ್ಯಾಕ್ಟರ್ ಸ್ವಯಂಚಾಲಿತ ಯಂತ್ರದೊಂದಿಗೆ ನಡೆದರೆ 100ಕ್ಕೂ ಹೆಚ್ಚು ತಪಾಸಣೆ ಮಾಡಬಹುದು. ಕವಿವಿ, ಡಿಎನ್​ಎ ಸಂಶೋಧನಾ ಕೇಂದ್ರ ಅಗತ್ಯ ಸಹಕಾರ ನೀಡಲು ಮುಂದೆ ಬಂದಿವೆ ಎಂದರು.

ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿದರು. ಶಾಸಕರಾದ ಸಿ.ಎಂ. ನಿಂಬಣ್ಣವರ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಕಿಮ್ಸ್​ನ ಡಾ. ಲಕ್ಷ್ಮೀಕಾಂತ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ, ಇತರರು ಇದ್ದರು.

ತೆರಿಗೆ ಪಾವತಿಗೆ ರಿಯಾಯ್ತಿ: ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ ಶೇ. 5ರಷ್ಟು ರಿಯಾಯ್ತಿ ನೀಡಲಾಗಿದೆ. ಮೇ 31ರವರೆಗೆ ಈ ಅವಕಾಶವಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. -ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ

ಸ್ವಯಂ ನಿಯಂತ್ರಣ ಮುಖ್ಯ: ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಕ್​ಡೌನ್ ಅವಧಿ ವಿಸ್ತರಣೆ ಮಾಡಿದ್ದಾರೆ. ಭಾರತದ ಭವಿಷ್ಯದ ದೃಷ್ಟಿಯಿಂದ ಕೈಗೊಂಡ ಈ ನಿರ್ಣಯವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ. 20ರ ಬಳಿಕ ತಕ್ಕಮಟ್ಟಿನ ಸಡಿಲಿಕೆ ಆಗಬಹುದು. ಕರೊನಾ ತಹಬಂದಿಗೆ ಬಂದರೆ ಕೆಲ ರಂಗಗಳಲ್ಲಿ ಸಡಿಲಿಕೆ ನೀಡಬಹುದು ಎಂಬುದು ಪ್ರಧಾನಮಂತ್ರಿ ಅವರ ಭಾಷಣದಲ್ಲಿ ವ್ಯಕ್ತವಾಗಿದೆ. ನಾಗರಿಕರು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಸ್ವಯಂ ಶಿಸ್ತು ಕಾಪಾಡಿಕೊಳ್ಳಬೇಕು. ಇದರಿಂದ ಕರೊನಾ ನಿಯಂತ್ರಣಕ್ಕೆ ತರಲು ಸಾಧ್ಯಎಂದರು. ಸುಖಾಸುಮ್ಮನೆ ಹೊರಗಡೆ ಬಂದು ತಿರುಗಾಡುವುದು ಕೆಲ ಜನರಿಗೆ ಫ್ಯಾಷನ್ ಆಗಿದೆ. ಬೈಕ್ ಹಾಗೂ ಕಾರುಗಳಲ್ಲಿ ನಗರ ಸುತ್ತಾಡಲು ಮುಂದಾಗುತ್ತಿದ್ದಾರೆ. ಇಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಇದೀಗ ಅವರಿಗೂ ಬೇಸರವಾಗಿದೆ. ಹೀಗಾಗಿ ಜನ ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು ಅತ್ಯಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net