ವಲಸೆ ಕಾರ್ಮಿಕರಿಗೆ ಹೈನುಗಾರಿಕೆ ತರಬೇತಿ

R K Patil
Published on

ಕಲಬುರಗಿ: ಮಹಾರಾಷ್ಟ್ರ ಇನ್ನಿತರ ಕಡೆಗೆ ವಲಸೆ ಹೋಗಿ ಕರೊನಾ ಹಾವಳಿಯಲ್ಲಿ ಬಂದಿರುವ ಕಾರ್ಮಿಕರು ಹಾಗೂ ರೈತರು ಮತ್ತೇ ಗುಳೆ ಹೋಗುವುದನ್ನು ತಡೆಯಲು ಅವರಿಗೆ ಹೈನುಗಾರಿಕೆ ಆರಂಭಿಸಲು ತರಬೇತಿ ನೀಡಲಾಗುವುದು. ನಿಮ್ಮ ಊರುಗಳಲ್ಲಿಯೇ ಸ್ವಾವಲಂಬಿಗಳಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ಕಲಬುರಗಿ- ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಪಾಟೀಲ (ಆರ್.ಕೆ.ಪಾಟೀಲ್) ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ 2.10 ಲಕ್ಷ ಜನ ವಲಸಿಗರು ಸೇರಿ ಒಕ್ಕೂಟದ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಸುಮಾರು 2.30 ಲಕ್ಷ ವಲಸಿಗ ಕಾರ್ಮಿಕರು ಬಂದಿದ್ದಾರೆ. ಈ ನಿಟ್ಟಿನಲ್ಲಿ ಖಜೂರಿ, ಮಾದನಹಿಪ್ಪರಗಾ, ಯಳಸಂಗಿ ಇನ್ನಿತರ ಕ್ವಾರಂಟೈನ್ ಸೆಂಟರ್ಗಳಿಗೆ ಭೇಟಿ ನೀಡಿ ಅಲ್ಲಿರುವ ವಲಸಿಗರೊಂದಿಗೆ ಚರ್ಚೆ ನಡೆಸಿ ಮನವೊಲಿಸುವ ಕೆಲಸ ಮಾಡಿದ್ದೇನೆ, ಅದಕ್ಕೆ ಹಲವು ಸ್ಪಂದಿಸಿದ್ದಾರೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲಿಯೇ ತರಬೇತಿ ನೀಡುವ ವ್ಯವಸ್ಥೆ ಇದೆ. ನೀವೇ ಹಾಲಿನ ಸೊಸೈಟಿ ಸ್ಥಾಪಿಸಿ ಹಾಲು ಮಾರಾಟ ಮಾಡಬಹುದು. ಎಲ್ಲಿಯೋ ಹೋಗಿ ಕೆಲಸಕ್ಕಾಗಿ ಕೈಚಾಚುವ ಬದಲು, ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿ. ಈ ಕುರಿತು ತಾವು ಬ್ಯಾಂಕರ್ಗಳ ಜತೆಗೆ ಚರ್ಚೆ ನಡೆಸಿ ಆಸಕ್ತರೆಲ್ಲರಿಗೂ ಸಾಲದ ನೆರವು ಸಿಗುವಂತೆ ಮಾಡಲು ಪ್ರಯತ್ನಿಸುತ್ತೇನೆ. ಒಂದೇ ಹಸುವಿನಿಂದಲೂ ಹಾಲು ಉತ್ಪಾದನೆ ಮಾಡಬಹುದಾಗಿದೆ. ಹೈನುಗಾರಿಕೆ ನಡೆಸುವ ಕುರಿತು ಒಕ್ಕೂಟದಿಂದ ಒಂದು ವಾರ ತರಬೇತಿ ನೀಡಲಾಗುವುದು. ಅವರಿಗೆ ಊಟ, ವಸತಿ ಸಹ ಕಲ್ಪಿಸಲಾಗುವುದು ಎಂದು ಪಾಟೀಲ್ ಹೇಳಿದರು.
ಒಕ್ಕೂಟದಿಂದ ಪ್ರತಿ ವಾರ ರೈತರಿಗೆ ಹಾಲಿನ ಬಿಲ್ ಪಾವತಿ ಮಾಡಲಾಗುತ್ತಿದೆ. ಒಕ್ಕೂಟದ ಸಿಬ್ಬಂದಿ ಸಹ ಮಾದರಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

20 ಸಾವಿರ ಲೀಟರ್ ಹಾಲು ಕೊರತೆ ಬರಪೀಡಿತ ಎಂದು ಹೇಳುವ ಕೋಲಾರ ಜಿಲ್ಲೆಯಷ್ಟೆ ಮಳೆ ಕಲಬುರಗಿ ಜಿಲ್ಲೆಯಲ್ಲಿಯೂ ಆಗುತ್ತದೆ. ಅವರಂತೆ ನಮ್ಮ ರೈತರು ಸಹ ಹಾಲು ಉತ್ಪಾದನೆ, ತೋಟಗಾರಿಕೆ, ಕೃಷಿಯಲ್ಲಿ ಸಾಧನೆ ಮಾಡಬಹುದಾಗಿದೆ. ಕೋಲಾರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಹಾಲು ಸಂಗ್ರಹವಾಗುತ್ತಿದೆ. ಇಲ್ಲಿ ಬೇಡಿಕೆ ಹೆಚ್ಚಿದೆ, ಸಂಗ್ರಹ ಕಡಿಮೆ ಇದೆ. 61 ಸಾವಿರ ಲೀಟರ್ ಮಾರಾಟವಾಗುತ್ತಿದ್ದರೆ, 45 ಸಾವಿರ ಲೀಟರ್ ಸಂಗ್ರಹಗೊಳ್ಳುತ್ತದೆ. ಈ ಕೊರತೆ ನೀಗಿಸಲು ವಿಜಯಪುರ, ಶಿವಮೊಗ್ಗ ಒಕ್ಕೂಟದಿಂದ ಹಾಲು ತರಿಸಿಕೊಳ್ಳುತ್ತೇವೆ. ನಮ್ಮಲ್ಲಿ ವಲಸೆ ಹೋಗಿ ಬಂದವರು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಅವರು ತಿಳಿಸಿದರು.

ಲಕ್ಷ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಗುರಿ
ಹಾಲು ಒಕ್ಕೂಟದ ಬೀದರ್ ,ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 4.60 ಲಕ್ಷ ಜಾನುವಾರುಗಳಿದ್ದು, ಅದರಲ್ಲಿ ಒಂದು ಲಕ್ಷ ಜಾನುವಾರುಗಳಿಗೆ ಕೃತಕ ಗರ್ಭ ಧಾರಣೆ ಮುಖಾಂತರ ತಳಿ ಅಭಿವೃದ್ಧಿ ಮಾಡಲು ಉದ್ದೇಶಿಸಿ ಗುರಿ ಹಾಕಿಕೊಳ್ಳಲಾಗಿದೆ. ನಾಲ್ಕು ತಿಂಗಳಲ್ಲಿ 9 ಸಾವಿರ ತಳಿಗಳಿಗೆ ಮಾತ್ರ ಕೃತಕ ಗರ್ಭಧಾರಣೆ ಮಾಡಲಾಗಿದೆ. ಈ ಪ್ರಯೋಗದಿಂದ ತಳಿ ಅಭಿವೃದ್ಧಿ ಜತೆಗೆ, ಹಾಲಿನ ಪ್ರಮಾಣವೂ ಹೆಚ್ಚಲಿದೆ ಎಂದು ರಾಮಚಂದ್ರಪ್ಪ ಪಾಟೀಲ್ ವಿವರಿಸಿದರು. ರೈತರು ಬೆಳೆದ ಮೆಕ್ಕೆ ಜೋಳವನ್ನು 1760 ರೂ.ಬೆಂಬಲ ಬೆಲೆಯಲ್ಲಿ ಕನರ್ಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ವತಿಯಿಂದ ನೇರವಾಗಿ ರೈತರಿಂದಲೇ ಖರೀದಿಸಲಾಗುತ್ತಿದೆ ಎಂದರು.


ನೆರೆರಾಜ್ಯಗಳಿಂದ ಕಲಬುರಗಿಗೆ ಬರುವ ಖಾಸಗಿ ಕಂಪನಿಗಳ ಕಲಬೆರಕೆ ಹಾಲಿನಲ್ಲಿ ರಾಸಾಯನಿಕ ಪ್ರಮಾಣ ಹೆಚ್ಚಿದ್ದು, ಅದು ಕ್ಯಾನ್ಸರ್ಕಾರಕವಾಗಿದೆ. ಹೀಗಾಗಿ ಮುಸ್ಲಿಂರು ಹಬ್ಬಕ್ಕೆ ನಂದಿನಿ ಹಾಲನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ರಂಜಾನ್ಕ್ಕೆ ಬೇಡಿಕೆಯಷ್ಟು ಹಾಲು ಪೂರೈಕೆ ಮಾಡಲಾಗುವುದು.
| ಆರ್.ಕೆ.ಪಾಟೀಲ್ ಅಧ್ಯಕ್ಷ
ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net