

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧೆಡೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಲತಾ, ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು, ತಿಪ್ಪೇನಹಳ್ಳಿ, ಬಾಗೇಪಲ್ಲಿಯ ದೇವರಗುಡಿಪಲ್ಲಿ, ಮಿಟ್ಟೇಮರಿಗೆ ಗುರುವಾರ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಂಟೇನ್ಮೆಂಟ್ ವಲಯಗಳಲ್ಲಿ ಸಿದ್ಧತೆಯ ಮಾಹಿತಿ ಪಡೆದರು.
ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದರಿಂದ ಈ ಭಾಗದಲ್ಲಿ ಸೋಂಕು ಹರಡುವ ಸಾಧ್ಯತೆಯಿದ್ದು, ನಿಯಂತ್ರಣಕ್ಕೆ ಗ್ರಾಮಸ್ಥರು ಸಹಕಾರ ನೀಡುವಂತೆ ಡಿಸಿ ಮನವಿ ಮಾಡಿದರು.
ಬೆಂಗಳೂರು ಸೇರಿ ಇತರೆಡಿಯಿಂದ ಇಲ್ಲವೇ ಅನ್ಯ ರಾಜ್ಯಗಳಿಂದ ಗ್ರಾಮಗಳಿಗೆ ಬರುವವರ ಬಗ್ಗೆ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆ ಮಾಡಬೇಕು. ಗ್ರಾಮದ 70 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಅವರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು.
ಸ್ಥಳೀಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಕಂಟೇನ್ಮೆಂಟ್ ವಲಯದಲ್ಲಿ ಸ್ವಚ್ಛತೆ, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಉತ್ತಮ ಆರೋಗ್ಯ ಸೇವೆಯಲ್ಲಿ ಲೋಪಕ್ಕೆ ಅವಕಾಶ ನೀಡದಂತೆ ಸೂಚಿಸಿದರು.
ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಸ್ವಯಂಸೇವಕರು ಅರಿವು ಮೂಡಿಸಬೇಕು. ಕಂಟೇನ್ಮೆಂಟ್ ಪ್ರದೇಶದಲ್ಲಿ ಯಾರೂ ಮನೆಯಿಂದ ಹೊರಗೆ ಬಾರದು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಎಚ್ಚರಿಸಿದರು.
ಈಗಾಗಲೇ ಗ್ರಾಪಂ ಮಟ್ಟದಲ್ಲಿ ರಚನೆಯಾಗಿರುವ ಟಾಸ್ಕ್‌ಫೋರ್ಸ್ ಕಮಿಟಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್ ಸೂಚಿಸಿದರು.
ತಹಸೀಲ್ದಾರ್‌ಗಳಾದ ಹನುಮಂತರಾಯಪ್ಪ, ನಾಗಪ್ರಶಾಂತ್, ನಾಗರಾಜು, ತಾಪಂ ಇಒ ಗಳಾದ ಬಿ.ಎಲ್.ಹರ್ಷವರ್ದನ್, ಮಂಜುನಾಥಸ್ವಾಮಿ, ಕರೊನಾ ನೋಡಲ್ ಅಧಿಕಾರಿ ಎಂ.ಪ್ರಸಾದ್ ಇತರರಿದ್ದರು.
ಚಿಂತಾಮಣಿ, ಕುರುಟಹಳ್ಳಿಗೆ ಭೇಟಿ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಚಿಸಲಾಗಿರುವ ಟಾಸ್ಕ್‌ಪೋರ್ಸ್ ಕಮಿಟಿಗಳ ಕಾರ್ಯನಿರ್ವಹಣೆಯನ್ನು ಖುದ್ದು ಜಿಲ್ಲಾಧಿಕಾರಿ ಅರ್.ಲತಾ ಪರಿಶೀಲನೆ ನಡೆಸಿದರು. ಗುರುವಾರ ನಗರದ ವಿವಿಧ ಬಡಾವಣೆಗಳು ಸೇರಿ ತಾಲೂಕಿನ ಕುರುಟಹಳ್ಳಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಸಿದರು. ಉಪ ವಿಭಾಗಾಧಿಕಾರಿ ರಘುನಂದನ್, ನೋಡಲ್ ಅಧಿಕಾರಿ ತೇಜ್ ಆನಂದರೆಡ್ಡಿ, ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಡಿವೈಎಸ್ಪಿ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾತಿ ಮತ್ತಿತರರಿದ್ದರು.