

ಹುಬ್ಬಳ್ಳಿ: ವಿಳಂಬಕ್ಕೆ ಹೆಸರಾಗಿರುವ ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್ಟಿಎಸ್) ಯೋಜನೆ ಲೋಕಾರ್ಪಣೆ ನಂತರವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ.
ಈ ಮೊದಲು ಯೋಜನೆ ಕಾಮಗಾರಿಯಲ್ಲಿನ ವಿಳಂಬದಿಂದಾಗಿ ಸಾರ್ವಜನಿಕ ನೆಮ್ಮದಿ ಕದಡಿದ್ದ ಬಿಆರ್ಟಿಎಸ್ ಅಧಿಕಾರಿಗಳು, ಯೋಜನೆ ಬಗ್ಗೆ ಏರ್ಪಡಿಸಿದ್ದ ವಿಡಿಯೋಗ್ರಾಫಿ ಸ್ಪರ್ಧೆಯಲ್ಲಿ ವಿಜೇತರ ಹೆಸರು ಘೊಷಿಸದೆ, ಭಾಗವಹಿಸಿದವರು ಚಾತಕ ಪಕ್ಷಿಯಂತೆ ಕಾಯುವಂತೆ ಮಾಡಿದೆ.
ಕಳೆದ ಫೆ. 2ರಂದು ಬಿಆರ್ಟಿಎಸ್ ಯೋಜನೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಲೋಕಾರ್ಪಣೆಗೊಳಿಸಿದರು. ಅದೇ ಸಮಯಕ್ಕೆ ತಾವು ಕಳುಹಿಸಿದ ವಿಡಿಯೋಗಳನ್ನು ಕಂಪನಿ ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ಕೊಡಬಹುದು ಎಂದು ಅನೇಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ಎಲ್ಲ ನಿರೀಕ್ಷೆ ಈಗ ಹುಸಿಯಾಗಿದ್ದು, ಬಿಆರ್ಟಿಎಸ್ ಕಚೇರಿಗೆ ಭೇಟಿ ಮಾಡಿ ಮಾಹಿತಿ ಕೇಳಿದವರಿಗೆ ಸಮರ್ಪಕ ಉತ್ತರವೂ ಸಿಗುತ್ತಿಲ್ಲ.
ಏನಿದು ಸ್ಪರ್ಧೆ?: ಹುಬ್ಬಳ್ಳಿ- ಧಾರವಾಡ ಬಿಆರ್ಟಿಎಸ್ ಯೋಜನೆಯ ಕುರಿತು ಸಾರ್ವಜನಿಕರು ಮತ್ತು ಪ್ರಯಾಣಿಕರ 10-15 ನಿಮಿಷದ ಸಮಗ್ರ ಮಾಹಿತಿ ನೀಡುವ ವಿಡಿಯೋ ಚಿತ್ರೀಕರಣ ಮಾಡಲು ಆಸಕ್ತ ವಿಡಿಯೋಗ್ರಾಫರ್, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿ 2018ರ ನವೆಂಬರ್ 28ರಂದು ಅರ್ಜಿ ಆಹ್ವಾನಿಸಲಾಗಿತ್ತು.
50ಕ್ಕೂ ಹೆಚ್ಚು ಆಸಕ್ತರು ಉತ್ಸಾಹದಿಂದ ಚಿತ್ರೀಕರಣ ಮಾಡಿ ಕಂಪನಿ ಹೇಳಿದ್ದ ಕೊನೇ ದಿನಾಂಕ 2018ರ ಡಿಸೆಂಬರ್ 15 ರೊಳಗೆ ಕಚೇರಿಗೆ ತಲುಪಿಸಿದ್ದರು. ಅತ್ಯುತ್ತಮ ವಿಡಿಯೋಗಳಿಗೆ ಮೊದಲ ಬಹುಮಾನ 1.50 ಲಕ್ಷ ರೂ., ಎರಡನೇ ಬಹುಮಾನ ಲಕ್ಷ ರೂ. ಹಾಗೂ ಮೂರನೇ ಬಹುಮಾನ 50 ಸಾವಿರ ರೂ. ಘೊಷಿಸಲಾಗಿತ್ತು.
ಅಲ್ಲದೆ, ಮೊದಲ ಸುತ್ತಿನಲ್ಲಿ ಆಯ್ಕೆಯಾದ ಉತ್ತಮ ಏಳು ವಿಡಿಯೋಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ಸಹ ನಿಗದಿಪಡಿಸಲಾಗಿತ್ತು. ಆದರೆ, ಆಸಕ್ತರಿಂದ ವಿಡಿಯೋ ಪಡೆದುಕೊಂಡು ಒಂದು ವರ್ಷ ಮೂರು ತಿಂಗಳಾಗುತ್ತ ಬಂದರೂ ಇದು ವರೆಗೂ ಅವುಗಳ ಬಗ್ಗೆ ಕಂಪನಿ ಚಕಾರ ಎತ್ತಿಲ್ಲ.
ವಿಡಿಯೋ ಮಾಡಿ ಕಳಿಸಿದ ಎರಡು ತಿಂಗಳ ನಂತರ ಆಯ್ಕೆ ಸಮಿತಿ ರಚಿಸಿ ಉತ್ತಮ ವಿಡಿಯೋಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಆಯ್ಕೆಯಾದ ವಿಡಿಯೋ ಮಾಡಿದ ಕೆಲವು ತಂಡಗಳೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಕಂಪನಿ ಅಧಿಕಾರಿಗಳು ಕಿರುಚಿತ್ರದಲ್ಲಿ ಕೆಲವು ತಿದ್ದುಪಡಿ ಮಾಡಲು ತಿಳಿಸಿದ್ದರು. ಅದರಂತೆ ಸ್ವಂತ ದುಡ್ಡು ಖರ್ಚು ಮಾಡಿ ಅನೇಕರು ವಿಡಿಯೋ ಮಾಡಿ ಎಲ್ಲ ಸರಿಪಡಿಸಿ ಸಿಡಿ ಸಲ್ಲಿಸಿದ್ದರು.
ಆದರೆ, ಅದಾದ ನಂತರ ಒಂದು ವರ್ಷವಾದರೂ ಈ ಕುರಿತು ಕಂಪನಿಯವರು ಯಾವುದೇ ಮಾಹಿತಿ ನೀಡಿಲ್ಲ. ದೂರವಾಣಿ ಮೂಲಕ ಕರೆ ಮಾಡಿ ಕೇಳಿದರೆ ಸರಿಯಾದ ಉತ್ತರವೂ ಕಂಪನಿಯಿಂದ ಸಿಗುತ್ತಿಲ್ಲ.
ಪತ್ರಕ್ಕೂ ಉತ್ತರವಿಲ್ಲ: ಕಂಪನಿ ಹೇಳಿದಂತೆ ವಿಡಿಯೋ ಚಿತ್ರೀಕರಣ ಸ್ಪರ್ಧೆಯಲ್ಲಿ ನಮ್ಮ ತಂಡ ಭಾಗಿಯಾಗಿ ಆಸಕ್ತಿಯಿಂದ ಯೋಜನೆಯ ಎಲ್ಲ ಆಯಾಮಗಳನ್ನು ಚಿತ್ರೀಕರಣ ಮಾಡಿ ಕೊಟ್ಟು ವರ್ಷ ಕಳೆದರೂ ವಿಜೇತರ ಆಯ್ಕೆ ನಡೆಯುತ್ತಿಲ್ಲ. ಕಳೆದ ಫೆಬ್ರವರಿಯಲ್ಲಿ ಕಂಪನಿಗೆ ಪತ್ರ ಬರೆದರೂ ಅದಕ್ಕೆ ಉತ್ತರ ಸಿಕ್ಕಿಲ್ಲ ಎಂದು ನಾಗರಾಜ ಪಾಟೀಲ ಅಲವತ್ತುಕೊಂಡಿದ್ದಾರೆ. ಈ ಮಧ್ಯೆ ಕಂಪನಿ ತಾನು ಪಡೆದಿರುವ ವಿಡಿಯೋಗಳಲ್ಲಿ ಕೆಲವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಸ್ಪರ್ಧಿಗಳು ದೂರಿದ್ದಾರೆ. ಈ ಬಗ್ಗೆ ಮಾಹಿತಿಗೆ ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರನ್ನು ವಿಜಯವಾಣಿ ಸಂರ್ಪಸಿದಾಗ ಅವರು ಮೊಬೈಲ್ ಫೋನ್ ಕರೆ ಸ್ವೀಕರಿಸಲಿಲ್ಲ.