ವರ್ಷಪೂರ್ತಿ ಕನ್ನಡ ಕಾರ್ಯಕ್ರಮಕ್ಕೆ ಸರ್ಕಾರ ಇಂಗಿತ -ಸಚಿವ ಶಿವರಾಜ ತಂಗಡಗಿ

Screenshot_2023-08-21-23-52-18-896_com.whatsapp.jpg
Published on

ದಾವಣಗೆರೆ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಈ ಬಾರಿ 50 ವರ್ಷ ಪೂರ್ಣವಾಗಲಿದೆ. ಹೀಗಾಗಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ನವೆಂಬರ್ 1ರಿಂದ ಪ್ರತಿ ಜಿಲ್ಲೆ, ತಾಲೂಕುವಾರು ಹಂತ ಹಂತವಾಗಿ ವರ್ಷಪೂರ್ತಿ ಕನ್ನಡದ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ದಾವಣಗೆರೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಂಗಳವಾರ ಬೆಳಗಾವಿ, 28 ರಂದು ಕಲಬುರಗಿ ಹಾಗೂ ಸೆ.4ರಂದು ಮೈಸೂರು ವಿಭಾಗ ಮಟ್ಟದಲ್ಲಿ ಸಾಹಿತಿಗಳ ಸಭೆ ಕರೆದು ಸಲಹೆ ಪಡೆದು ಚರ್ಚಿಸಿ ಕಾರ್ಯಕ್ರಮ ರೂಪುರೇಷೆ ನಿರ್ಧರಿಸಲಾಗುವುದು ಎಂದ ಸಚಿವರು, ಡಿ.ದೇವರಾಜ ಅರಸು ಕಾಲದಲ್ಲಿ ಕರ್ನಾಟಕ ಎಂದು ಹೆಸರಿಡಲಾಗಿತ್ತು. 50 ವರ್ಷದ ನಂತರ ಸಿದ್ದರಾಮಯ್ಯ ಸಿಎಂ ಆಗಿರುವುದು ಕಾಕತಾಳೀಯ. ಇಬ್ಬರೂ ದಲಿತ ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಚಿಂತನೆ ನಡೆಸಿದವರು ಎಂದು ಹೇಳಿದರು.

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಪ್ರಸ್ತಾಪ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೈನತ್ತ ಬರ್ತಾರೆ ಹೆಚ್ಚಿನ ವಿಪಕ್ಷ ಶಾಸಕರು

ರಾಜ್ಯ ಸರ್ಕಾರ ಸಾಮಾನ್ಯ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದನ್ನು ಗಮನಿಸಿ ಬಿಜೆಪಿ-ಜೆಡಿಎಸ್‌ನಿಂದ ಹೆಚ್ಚಿನ ಶಾಸಕರು ಕಾಂಗ್ರೆಸ್‌ನತ್ತ ಬರಲಿದ್ದಾರೆ ಎಂದು ಸಚಿವರು ಹೇಳಿದರು.

136 ಶಾಸಕರೊಂದಿಗೆ ಸರ್ಕಾರ ಭದ್ರವಾಗಿದೆ. ಆದರೂ ಅನ್ಯ ಪಕ್ಷದ ಶಾಸಕರು ಕಾಂಗ್ರೆಸ್‌ಗೆ ಶಕ್ತಿ ತುಂಬಲು ಬರಲಿದ್ದಾರೆ. ಕಾಂಗ್ರೆಸ್‌ನಿಂದ ಹೋದವರೂ, ಬಿಜೆಪಿಯಲ್ಲಿ ಇದ್ದವರೂ ನಮ್ಮಲ್ಲಿಗೆ ಬರುತ್ತಾರೆ. ನಾವು ಮನಸ್ಸು ಮಾಡಿ ಆಹ್ವಾನಿಸಿದರೆ ಬಿಜೆಪಿ, ಜೆಡಿಎಸ್ ಮನೆ ಸಂಪೂರ್ಣ ಖಾಲಿಯಾಗಲಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರೂ ಆಪರೇಷನ್ ಯತ್ನ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ ಐದು ವರ್ಷ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಗಲ್ಲಿ-ಗಲ್ಲಿಗೆ, ವಾರ್ಡ್-ವಾರ್ಡಿಗೆ ಭೇಟಿ ಮಾಡಿದರೂ 66 ಶಾಸಕರು ಮಾತ್ರ ಚುನಾಯಿತರಾದರು. ಹೀಗಾಗಿ ಯಾರೂ ಸಹ ಕಾಂಗ್ರೆಸ್‌ನಿಮದ ಬಿಜೆಪಿಗೆ ಹೋಗುವ ಪರಿಸ್ಥಿತಿ ಇಲ್ಲ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಯಾವುದೇ ಸರ್ಕಾರ ಬಂದಾಗಲೂ ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆ. ಭ್ರಷ್ಟಾಚಾರಿಗಳ ಸ್ಥಳ ಬದಲಾವಣೆ ಮಾಡಲಾಗುತ್ತದೆ. ಅದನ್ನೇ ವರ್ಗಾವಣೆ ದಂಧೆ ಎಂದರೆ ಹೇಗೆ. ಅವರ ಆಡಳಿತದಲ್ಲಿ ವರ್ಗಾವಣೆ ನಡೆದೇ ಇಲ್ಲವಾ ಎಂದು ಪ್ರಶ್ನಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿಗರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ಈ ಸಂಬಂಧ ಸಿಎಂ, 23ರಂದು ಸರ್ವಪಕ್ಷ ಸಭೆ ಕರೆದಿದ್ದು, ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net