ವರ್ಷಧಾರೆಗೆ ನೆಲಕಚ್ಚಿದ ಬೆಳೆ

6MDG1
Published on

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಭಾರಿ ಗಾಳಿ ಸಮೇತ ಸುರಿದ ಮಳೆಯಿಂದಾಗಿ ತುಂಗಭದ್ರಾ ನದಿ ಭಾಗದ ಕಬ್ಬು, ಬಾಳೆ, ಭತ್ತದ ಬೆಳೆ ಹಾನಿಯಾಗಿದೆ. ಹಮ್ಮಿಗಿ, ಶಿಂಗಟಾಲೂರು, ಗಂಗಾಪುರ, ಶೀರನಹಳ್ಳಿ, ಕೊರ್ಲಹಳ್ಳಿ ಮೊದಲಾದ ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಸಮೃದ್ಧವಾಗಿ ಬೆಳೆದು ನಿಂತಿದ್ದ ಕಬ್ಬು, ಬಾಳೆ ಹಾಗೂ ಕಟಾವಿಗೆ ಬಂದಿದ್ದ ಭತ್ತ ಸಂಪೂರ್ಣ ನೆಲಕಚ್ಚಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಪ್ರತಿ ಎಕರೆ ಭತ್ತ ಬೆಳೆಯಲು 30ರಿಂದ 35 ಸಾವಿರ ರೂ, ಪ್ರತಿ ಎಕರೆ ಕಬ್ಬು ಬೆಳೆಗೆ 40 ರಿಂದ 45 ಸಾವಿರ ರೂ. ಖರ್ಚು ಹಾಗೂ ಪ್ರತಿ ಎಕರೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಬೆಳೆದ ರೈತರು ಈಗ ಕಣ್ಣೀರು ಹಾಕುವಂತಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ.

ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರು ಹಾನಿಯಾಗಿದ್ದು ನೋಡಿದರೆ ತುಂಬಾ ನೋವಾಗುತ್ತದೆ. ಅಧಿಕಾರಿಗಳು ರೈತರ ನೆರವಿಗೆ ಬರಬೇಕು ಎಂದು ರೈತರಾದ ವೀರನಗೌಡ ಪಾಟೀಲ, ಮಲ್ಲೇಶ ಲಮಾಣಿ ಇತರರು ಒತ್ತಾಯಿಸಿದರು.

ಹಾರಿಹೋದ ತಗಡಿನ ಶೆಡ್ ...

ಗಾಳಿ-ಮಳೆಗೆ ಗಂಗಾಪುರ ಗ್ರಾಮದ ನಿರಾಶ್ರಿತ ಕುಟುಂಬಗಳಾದ ಕೆಂಚವ್ವ ತಳಗೇರಿ, ನಾಗಮ್ಮ ತಳಗೇರಿ, ಸುಮಂಗಳಾ ತಳಗೇರಿ, ಶಾರವ್ವ ತಳಗೇರಿ, ಹನುಮವ್ವ ತಳಗೇರಿ ಎಂಬುವರಿಗೆ ಸೇರಿದ ತಗಡಿನ ಶೆಡ್​ಗಳು ಕಿತ್ತೋಗಿವೆ. ಇದರಿಂದ ಅವರ ಕುಟುಂಬ ಈಗ ಬೀದಿಗೆ ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ನೆರವಿಗೆ ಬರಬೇಕು ಎನ್ನುತ್ತಾರೆ ನಿರಾಶ್ರಿತ ಕುಟುಂಬದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net