

ಮೈಸೂರು: ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವುದು ಅತಿ ಮುಖ್ಯ. ಪರಿಸರ ಸಂರಕ್ಷಣೆಗಾಗಿ ವರ್ಷಕ್ಕೊಂದು ಗಿಡನೆಟ್ಟು ಪೋಷಿಸಿದರೆ ಸಾಕು ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ‘ಹಸಿರು ಮೈಸೂರು- ಲಕ್ಷ ವೃಕ್ಷ ಆಂದೋಲನ’ದ ಅಂಗವಾಗಿ ಮೈಸೂರು- ನಂಜನಗೂಡು ಮುಖ್ಯರಸ್ತೆಯ ನರ್ಸರಿಯಲ್ಲಿ ಆಯೋಜಿಸಿದ್ದ 15 ಸಾವಿರ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಕೆಲವೊಂದನ್ನು ಕೃತಕವಾಗಿ ಸೃಷ್ಠಿ ಮಾಡಬಹುದಾಗಿದ್ದರೂ, ಪ್ರಕೃತಿ, ಗಾಳಿ, ನೀರನ್ನು ಸೃಷ್ಠಿ ಮಾಡಲಾರ. ಹಾಗಾಗಿ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಎಲ್ಲರಲ್ಲೂ ಪರಿಸರ ಪ್ರಜ್ಞೆ ಮೂಡಬೇಕಿದ್ದು, ತಮ್ಮ ಮನೆಯ ಸುತ್ತ ವರ್ಷಕ್ಕೆ ಒಂದೆರಡು ಗಿಡ ಬೆಳೆಸಿದರೂ ಸಾಕು ಎಂದು ಹೇಳಿದರು.
ಸೌಲಭ್ಯ ಬೇಕು ಎಂದು ಸಿಕ್ಕ, ಸಿಕ್ಕ ಮರಗಳನ್ನು ಕಡಿಯುವುದು ಸರಿಯಲ್ಲ. ಅನಿವಾರ್ಯ ಸಂದರ್ಭದಲ್ಲಿ ಮರ ಕಡಿದರೂ ಅದರ ಬದಲು ಎರಡು ಗಿಡನೆಟ್ಟು ಬೆಳೆಸಬೇಕು. ಇದರಿಂದ ಪರಿಸರ ಸಮತೋಲನ ಅಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ನಾವು ಪರಿಸರ ದಿನಾಚರಣೆ ಬಂದಾಗ ಮಾತ್ರ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಪರಿಸರ ಕಾಳಜಿ ನಿತ್ಯೋತ್ಸವ ಆಗಬೇಕು. ನಿತ್ಯವೂ ಊಟ, ನಿದ್ದೆ, ಪೂಜೆ ಮಾಡುವಂತೆ ಪರಿಸರ ಉಳಿಸುವ ಚಟುವಟಿಕೆಗಳನ್ನು ನಿತ್ಯವೂ ಮಾಡಬೇಕೆಂದರು.
ಪರಿಸರ ನಮ್ಮನ್ನು ನಿಷ್ಕಾಮ ಪ್ರೀತಿ, ಪ್ರತಿಫಲಾಪೇಕ್ಷೆ ಇಲ್ಲದೆ ಪೋಷಣೆ ಮಾಡುತ್ತೆ. ನದಿ, ಜಲ ಮೂಲ ಇಲ್ಲದೆ ಇದ್ದರೆ ಕುಡಿಯುವ ನೀರು ಸಿಗುವುದಿಲ್ಲ. ಆದರೆ ಈಗಿನ ತಲೆಮಾರಿನ ಮಕ್ಕಳಿಗೆ ಹಣ್ಣು, ತರಕಾರಿ ಹೇಗೆ ಬೆಳೆಯುತ್ತೆ ಎಂಬುದನ್ನು ತೋಟಕ್ಕೆ ಕರೆದೊಯ್ದು ತೋರಿಸಬೇಕಿದೆ. ಬೆಂಗಳೂರಿನಲ್ಲಿ ಕೆಲವರು ಇದನ್ನೇ ಉದ್ಯಮ ಮಾಡಿಕೊಂಡಿದ್ದಾರೆ ಎಂದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ನಮ್ಮ ಬಳಗದಿಂದ ಐದು ವರ್ಷಗಳಿಂದ ಹಸಿರು ಮೈಸೂರು ಆಂದೋಲನ ಮುನ್ನಡೆಸುತ್ತಿದೆ. ಇದುವರೆಗೆ ಸುಮಾರು 70 ಸಾವಿರ ಗಿಡಗಳನ್ನು ವಿತರಣೆ ಮಾಡಲಾಗಿದ್ದು, ಈ ವರ್ಷ 15 ಸಾವಿರ ಗಿಡಗಳನ್ನು ವಿತರಣೆ ಮಾಡಲಾಗುವುದು. ನೆಟ್ಟ ಗಿಡಗಳ ನಿರ್ವಹಣೆಯ ಜವಾಬ್ದಾರಿಯನ್ನು ಹಲವು ಸಂಘಟನೆಗಳು ವಹಿಸಿಕೊಂಡಿವೆ. ಪರಿಣಾಮವಾಗಿ ನಾವು ನೆಟ್ಟ ಗಿಡಗಳ ಪೈಕಿ ಶೇ.95ರಷ್ಟು ಉಳಿದುಕೊಳ್ಳುತ್ತಿವೆ ಎಂದು ಹೇಳಿದರು.
ಪರಿಸರ ಕಾಳಜಿಯ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಿ.ಎಲ್.ಭೈರಪ್ಪ, ಗೋಕುಲ್ ಗೋವರ್ಧನ್, ಕುಮಾರ್ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಪತ್ರಕರ್ತ ವಿಕ್ರಂ ಮುತ್ತಣ್ಣ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಿ.ಪೈಸ್ ಇತರರು ಇದ್ದರು.