ವರ್ಷಂತ್ಯದೊಳಗೆ ಎಲ್ಲರಿಗೂ ಕರೊನಾ ಲಸಿಕೆ ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ; ರಾಜ್ಯಮಟ್ಟದ ಪೋರ್ಟಲ್ ಆರಂಭಕ್ಕೆ ಚಿಂತನೆ

DSC_0279
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು, ಬಹುದಿನಗಳ ನಂತರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಗೆ ಆಗಮಿಸಿ ಗುರುವಾರ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು. ವರ್ಷಾಂತ್ಯದೊಳಗೆ ಎಲ್ಲರಿಗೂ ಕರೊನಾ ಲಸಿಕೆ ಲಭ್ಯವಾಗಲಿದೆ ಎಂದು ಡಾ.ಕೆ.ಸುಧಾಕರ್ ಭರವಸೆ ನೀಡಿದರು.

ಕೋವಿನ್ ಪೋರ್ಟಲ್‌ನಲ್ಲಿ ಯಾರು ಎಲ್ಲಿಯಾದರೂ ನೋಂದಣಿ ವಾಡಿಕೊಂಡು ಲಸಿಕೆ ಪಡೆಯಲು ಅವಕಾಶವಿದೆ, ಬೆಂಗಳೂರಿಗರು ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಆಯಾ ಜಿಲ್ಲೆಯ ಜನರು ಲಸಿಕೆ ಪಡೆಯುವಂತೆ ವಾಡುವ ಸಲುವಾಗಿ ರಾಜ್ಯಮಟ್ಟದ ಪೋರ್ಟಲ್ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಜಿಲ್ಲೆಯಲ್ಲಿ 6 ಆಕ್ಸಿಜನ್ ಉತ್ಪಾದನಾ ಟಕ ನಿರ್ಮಾಣವಾಗುತ್ತಿದೆ, ಜಿಲ್ಲಾಸ್ಪತ್ರೆಗೆ 25 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದ್ದು, ಔಷಧಕ್ಕೂ ಕೊರತೆಯಿಲ್ಲ, ಸೋಂಕು ದೃಢಪಟ್ಟ ಸೋಂಕಿತನಿಗೆ 45 ಗಂಟೆಯೊಳಗೆ ಕೋವಿಡ್ ಮೆಡಿಕಲ್ ಕಿಟ್ ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರಂಭದ ಸ್ಫೋಟದ ನಡುವೆಯೂ ಜಿಲ್ಲೆಯಲ್ಲಿ ಕೋವಿಡ್ ನಿಗ್ರಹವಾಗುತ್ತಿದೆ, ಮೂರನೇ ಅಲೆ ಕಡಿವಾಣಕ್ಕೆ ಆರೋಗ್ಯ ಇಲಾಖೆ ಮೂಲಸೌಕರ್ಯಗಳನ್ನು ಹೆಚ್ಚು ವಾಡಿಕೊಂಡು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗುತ್ತಿದೆ. ಬೇಕಾದ ಎಲ್ಲ ಸಿದ್ಧತೆಗಳನ್ನು ವಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ವೈ.ಎಸ್.ಪಾಟೀಲ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಡಾ.ಎಚ್.ಡಿ.ರಂಗನಾಥ್, ಜಿ.ಬಿ.ಜ್ಯೋತಿಗಣೇಶ್, ಡಾ.ರಾಜೇಶ್ ಗೌಡ, ಬಿ.ಸಿ.ನಾಗೇಶ್, ಮಸಾಲೆ ಜಯರಾಮ್, ಮೇಯರ್ ಬಿ.ಜಿ.ಕೃಷ್ಣಪ್ಪ ಇದ್ದರು.

ಕನಿಷ್ಠ 500 ಹಾಸಿಗೆಗೆ ಹೆಚ್ಚಿಸಿ: ಜಿಲ್ಲೆಯಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿದ್ದರೂ ಸೋಂಕಿತರಿಗೆ ಹೆಚ್ಚು ಹಾಸಿಗೆ ಲಭ್ಯವಿಲ್ಲದಿರುವುದು ಸರಿಯಲ್ಲ, ಕೂಡಲೇ ಎರಡೂ ಮೆಡಿಕಲ್ ಕಾಲೇಜುಗಳಲ್ಲಿ ಆಮ್ಲಜನಕ ಸಹಿತ ಕನಿಷ್ಠ 500 ಹಾಸಿಗೆಗೆ ಹೆಚ್ಚಿಸಬೇಕು, ಸರ್ಕಾರದ ಆದೇಶದಂತೆ ಕೂಡಲೇ ಶೇ.50 ಹಾಸಿಗೆ ಮೀಸಲಿರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಡಿಎಚ್‌ಒಗೆ ಸಚಿವ ಸುಧಾಕರ್ ಸೂಚಿಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಇನ್ನೂ 50 ಹಾಸಿಗೆ ಹೆಚ್ಚಿಸಬೇಕು, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿಗೆ 100 ಹಾಸಿಗೆಗಳ ಸಮುದಾಯ ಆಸ್ಪತ್ರೆ ಕೊಟ್ಟರೆ ಮೊರನೇ ಅಲೆ ನಿಯಂತ್ರಿಸಲು ಅನುಕೂಲವಾಗಲಿದೆ ಎಂದರು.

ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಿಗೆ ನಿರ್ದೇಶನ... : ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿ, ಐಸಿಯು ದರದಲ್ಲಿ ಬಿಲ್ ಪಡೆಯುತ್ತಿರುವ ದೂರುಗಳಿದ್ದು ಕಡಿವಾಣ ಹಾಕಬೇಕು, ಕರೊನಾ ಪರೀಕ್ಷೆ, ಸಿಟಿ ಸ್ಕಾೃನ್‌ಗೂ ಸರ್ಕಾರದ ಸೂಚಿಸಿರುವ ದರವನ್ನು ಪಡೆಯಬೇಕು ಈ ಬಗ್ಗೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಡಾ.ಕೆ.ಸುಧಾಕರ್ ಸೂಚಿಸಿದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 678 ಆಮ್ಲಜನಕ ಹಾಸಿಗೆ, 87 ವೆಂಟಿಲೇಟರ್‌ಗಳಿದ್ದು ಈ ಪೈಕಿ 8 ಆಮ್ಲಜನಕ ಹಾಸಿಗೆ ಮತ್ತು 13 ವೆಂಟಿಲೇಟರ್ ಖಾಲಿ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 581 ಆಮ್ಲಜನಕ ಹಾಸಿಗೆ, 48 ವೆಂಟಿಲೇಟರ್‌ಗಳಿದ್ದು ಈ ಪೈಕಿ 89 ಆಮ್ಲಜನಕ ಹಾಸಿಗೆ ಮತ್ತು 10 ವೆಂಟಿಲೇಟರ್‌ಗಳು ಖಾಲಿಯಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈವರೆಗೆ ಸರ್ಕಾರಿ ಮತ್ತು ಖಾಸಗಿ ಸೇರಿ 659533 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, 62306 ಜನರಿಗೆ ಸೋಂಕು ದೃಢವಾಗಿದೆ. 213253 ಆ್ಯಂಟಿಜೆನ್ ಪರೀಕ್ಷೆ ವಾಡಲಾಗಿದ್ದು, 21634 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ಸಭೆಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುವಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಯಂತ್ರಗಳಿದ್ದರೂ ಹೊರಗಡೆ ಕಳುಹಿಸಲಾಗುತ್ತಿದೆ, ವಾರವಾದರೂ ಕೆಟ್ಟಿದೆ ಎಂದೇ ಉತ್ತರ ಬರುತ್ತಿದೆ. ಇದು ಬದಲಾಗಬೇಕು, ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕಾೃನ್ ನಡೆಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಸಮರ್ಪಕ ಸೇವೆಗೆ ಕ್ರಮಕೈಗೊಳ್ಳಬೇಕು.

ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net