

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ಸೇರ್ಪಡೆಯಾದ ಮೇಲೆ ಪಕ್ಷಕ್ಕೆ ಶಕ್ತಿ ಬಂದಿದೆ. ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಈಗಿನಿಂದಲೇ ಬೂತ್ಮಟ್ಟದಿಂದ ತಯಾರಿ ನಡೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಿಂದ 4 ಬಿಜೆಪಿ ಶಾಸಕರು ವಿಧಾನ ಸಭೆಗೆ ಪ್ರವೇಶ ಮಾಡುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರವು ಬಿಜೆಪಿಮಯವಾಗಬೇಕು. ಗ್ರಾಮಮಟ್ಟದಿಂದ ಪಕ್ಷ ಸಂಘಟಿಸುವ ಮೂಲಕ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಬೇಕು. ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಶೀಘ್ರದಲ್ಲೇ ಜಿಲ್ಲೆಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ರಾಷ್ಟ್ರೀಯ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಅವರಿಗೆ ನಮ್ಮ ಶಕ್ತಿ ಪ್ರದರ್ಶಿಸಬೇಕು. ಪ್ರತಿ ಗ್ರಾಪಂ, ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ಮಾಡುತ್ತೇವೆ. ಇದಕ್ಕೆ ಜಿಲ್ಲಾ ಸಚಿವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಒಳ್ಳೆಯ ದಿನಗಳು ಸಮೀಪಿಸುತ್ತಿವೆ ಎಂದು ಹೇಳಿದರು.
ಕೋಲಾರ ಕ್ಷೇತ್ರದಲ್ಲಿ ಶಾಸಕ ಶ್ರೀನಿವಾಸಗೌಡ ರ್ನಿಲಕ್ಷದಿಂದ ಜನರ ಸಮಸ್ಯೆಗಳು ಬಗೆಹರಿದಿಲ್ಲ. ಅವರು ಅಧಿಕಾರಕ್ಕೆ ಬಂದ ಮೇಲೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಒಂದೇ ಒಂದು ಕೊಳವೆಬಾವಿ ಕೊರೆಸಿಲ್ಲ. ಇದು ಅವರ ಸಾಧನೆಯೇ? ಅವರು ಅಧಿಕಾರಕ್ಕೆ ಬಂದಾಗ ಜತೆಯಲ್ಲಿದ್ದ ಮುಖಂಡರೆಲ್ಲ ಈಗ ದೂರ ಉಳಿದುಕೊಂಡಿದ್ದಾರೆ. ಸಮಸ್ಯೆಗೆ ಸ್ಪಂದಿಸದಿದ್ದರೆ ಯಾರು ಜತೆಯಲ್ಲಿ ಇರುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಆಯುಷ್ಮಾನ್ ಭಾರತ್ ಯೋಜನೆಯಿಂದ 10 ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಂಡಿವೆ. ಉಚಿತ ಅನಿಲ ಸಂಪರ್ಕ ಕಲ್ಪಿಸುವ ಉಜ್ವಲ ಯೋಜನೆಯಿಂದ 9 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ಸ್ವಚ್ಛ ಭಾರತ್ ಯೋಜನೆಯಲ್ಲಿ 10 ಕೋಟಿ ಶೌಚಗೃಹ, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10 ಕೋಟಿ ರೈತರಿಗೆ ನೆರವಾಗಿದ್ದು, ಮೋದಿ ಅವರು ನೀಡಿದ ಜನಪ್ರಿಯ ಕಾರ್ಯಕ್ರಮಗಳು ನೇರ ಜನರಿಗೆ ತಲುಪಿವೆ ಎಂದರು.
ಸಂಸದ ಮುನಿಸ್ವಾಮಿ ಕಾರ್ಯಕಾರಿಣಿಗೆ ಚಾಲನೆ ನೀಡಿದರು. ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಮಚಂದ್ರಪ್ಪ ಇತರರು ಇದ್ದರು.