

ಮೈಸೂರು: ನಗರದ ವರ್ತುಲ ರಸ್ತೆಯಲ್ಲಿ ಸೋಮವಾರದಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ಶನಿವಾರ ನಗರ ಪಾಲಿಕೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ತೀರ್ಮಾನಿಸಲಾ ಯಿತು.
ಮೈಸೂರು ಮಹಾ ನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ ಹಾಗೂ ಕಡಕೊಳ ಪಟ್ಟಣ ಪಂಚಾಯಿತಿ ಜತೆಗೂಡಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು. ವರ್ತುಲ ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಕುರುಚಲು ಗಿಡಗಳು ಒಣಗಿ ನಿಂತಿದ್ದು, ಜನರು ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಸಂದರ್ಭ ಕುರುಚಲು ಗಿಡಗಳು ಸುಟ್ಟು ಕರಕಲಾಗಿವೆ. ಕುರುಚಲು ಗಿಡಗಳ ನಡುವೆ ನಾವು ನೆಟ್ಟು ಬೆಳೆಸಿದ್ದ ಗಿಡಗಳು ಸಹ ಬೆಂಕಿಗೆ ಆಹುತಿಯಾಗಿವೆ. ಹೀಗಾಗಿ ವರ್ತುಲ ರಸ್ತೆಯಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಿಸಿ ಕ್ಯಾಮರಾ ಅಳವಡಿಸಿ: ಜನರು ತ್ಯಾಜ್ಯ ತಂದು ಸುರಿಯುವ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಕೆಲವು ಮಾಂಸ ಮಾರಾಟದ ಅಂಗಡಿಯವರು ತ್ಯಾಜ್ಯವನ್ನು ಸುರಿಯುತ್ತಿದ್ದು, ಇದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ರೀತಿ ಮಾಂಸ ತ್ಯಾಜ್ಯ ಸುರಿಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಹೈದರಬಾದ್‌ನಲ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ ಘಟನೆಗಳು ಇಲ್ಲೂ ನಡೆಯುವ ಸಾಧ್ಯತೆ ಇದ್ದು, ಅದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದರು.
ಸಭೆಯಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್ ಹಾಗೂ ಇತರರು ಇದ್ದರು.