

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಹೊಯ್ಸಳ ಸಾಹಿತ್ಯೋತ್ಸವದ ಎರಡನೇ ದಿನವಾದ ಭಾನುವಾರ ಮೊದಲ ಗೋಷ್ಠಿ ‘ಕವಿ ಸಮಯ’ದಲ್ಲಿ ಭಾಗವಹಿಸಿದ್ದ ನಾಡಿನ ಪ್ರಸಿದ್ಧ ಕವಿಗಳು ವರ್ತಮಾನ ಸಮಾಜದ ಸಮಸ್ಯೆಗಳಿಗೆ ಮುಖಾಮುಖಿ ಆಗುವ ಕವಿತೆಗಳನ್ನು ವಾಚನ ಮಾಡಿ ಸಭಿಕರ ಚಪ್ಪಾಳೆ ಗಿಟ್ಟಿಸಿದರು.
ಫೈರ್‌ಬ್ಯಾಂಡ್ ಕವಯಿತ್ರಿ ಎಂದೇ ಹೆಸರಾಗಿರುವ ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರು ‘ಆಪ್ ಕ್ಯಾ ಹೋಗಾ ಜನಾಬೇ ಆಲಿ’ ಎಂಬ ಕವನ ವಾಚಿಸಿ ಹೆಣ್ಣನ್ನು ನಿಯಂತ್ರಿಸುವ ಪುರುಷಾಹಂಕಾರದ ಕುರಿತು ಖಾರವಾದ ಪ್ರಶ್ನೆಗಳನ್ನು ಕೇಳುತ್ತಲೇ ಬಿಸಿ ಮುಟ್ಟಿಸಿದರು. ‘ನಾವು ಕುಚು, ನಿತಂಬಗಳ ಬಗ್ಗೆ ಬರೆಯಬಾರದು, ಆದರೆ ನೀವು ಅದನ್ನು ವಿರೋಪಗೊಳಿಸಬಹುದು’ ಎಂದು ಹೇಳಿ ಹೆಣ್ಣನ್ನು ನಿಯಂತ್ರಿಸಲು ಅತ್ಯಾಚಾರವನ್ನು ಅಸ್ತ್ರ ಮಾಡಿಕೊಂಡಿರುವ ಪುರುಷಾಧಿಪತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಶಿಶ್ನ ಹೊರತುಪಡಿಸಿ ನಿನಗೆ ಯಾವ ಅಸ್ತಿತ್ವವೂ ಇಲ್ಲ, ಆದರೆ ಹೆಣ್ಣು ಮುಟ್ಟು ನಿಂತರೂ ಹೆಣ್ಣೇ, ಆಪ್ ಕ್ಯಾ ಹೋಗಾ ಜನಾಬೇ ಆಲಿ’ ಎಂಬ ಮಾರ್ಮಿಕ ಪ್ರಶ್ನೆ ಎಸೆದರು.
‘ಸ್ಕರ್ಟ್ ತೊಟ್ಟ ಹುಡುಗಿಗೆ’ ಎಂಬ ಕವನದಲ್ಲಿ ಹೆಣ್ಣಿಗೆ ಡ್ರೆಸ್‌ಕೋಡ್ ಕಡ್ಡಾಯ ಮಾಡುವ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಕುರಿತು ಹಾಗೂ ‘ಗೋವು ನಗರ ನಕ್ಸಲ್ ಆದ ಕಥೆ’ ಕವನದಲ್ಲಿ ಗೋ ರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ರಾಜಕೀಯ, ಮಠಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ತಮ್ಮದೇ ಆದ ಧಾಟಿಯಲ್ಲಿ ಬೆಳಕು ಚೆಲ್ಲಿ ಸಭಿಕರ ಕರತಾಡನಕ್ಕೆ ಕಾರಣರಾದರು.
ನಾಡಿನ ಮತ್ತೊಬ್ಬ ಮಹತ್ವದ ಕವಿ ಡಾ. ಟಿ. ಯಲ್ಲಪ್ಪ ಅವರು ವಾಚಿಸಿದ ‘ಭಾರತ ಬೆಳಗುತ್ತಿದೆ’ ಎಂಬ ಕವನ ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿಯುವಂತಿತ್ತು. ‘ಈ ದೇಶದ ಧರ್ಮ ಪ್ರವರ್ತಕರ ಮತದ ವರ್ತಕರ ನಮ್ಮನ್ನು ಸರಕಾಗಿಸಿಬಿಡುವ ಈ ದುಷ್ಟ ದುರುಳ ಹುನ್ನಾರಗಳ ಹುಟ್ಟಡಗಿಸುವ ಯಾವುದಾದರೊಂದು ಗುಳಿಗೆ ಇದ್ದರೆ ಕೊಡಿ ಸ್ವಾಮಿ’ ಎಂದು ಕೇಳುವ ಮೂಲಕ ಪ್ರಸಕ್ತ ಸಾಮಾಜಿಕ ದುರಂತ ಪರಿಸ್ಥಿತಿಯ ಅಸಹಾಯಕತೆಯನ್ನು ಬಿಚ್ಚಿಟ್ಟರು. ‘ಯಾವುದರ ಗೊಡವೆಯೂ ಬೇಡೆಂದು ಜ್ಞಾನ ವಿಸ್ಮತಿಯಲಿ ವಿಧಾನಸೌಧದಲಿ ನಿಧಾನವಾಗಿ ಅಡ್ಡಾಡುವ ಅಡ್ನಾಡಿ ವಿಚಾರವಾದಿಗಳ ಮಿತಿಭ್ರಮೆಯ ಮತಭ್ರಮೆಯ ವಿಭ್ರಾಂತಿಗಳ ವೀರೇಚಿಸಿ ಬಿಡುವ ಒಂದು ಸ್ಲೋಗನ್ನು ಗನ್ನು ಇದ್ದರೆ ಕೊಡಿ ಸ್ವಾಮಿ’ ಎಂದು ಹೇಳುವ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ವಿಮುಖರಾಗಿರುವ ವಿಚಾರವಾದಿಗಳನ್ನು ಕುಟುಕಿದರು.
‘ನಿವೇದನೆ’ ಎಂಬ ಕವನದಲ್ಲಿ ‘ಸ್ಪರ್ಶ ಸುಖವೆನ್ನುತ್ತೀರಿ, ಅದು ನಿಜವಾದರೆ ನಮ್ಮನ್ನು ಒಮ್ಮೆ ಸ್ಪರ್ಶಿಸಿ, ಶತಮಾನಗಳ ಅಸ್ಪಶ್ಯತೆ ಕಳಂಕ ತೊಡೆದು ಹೋಗಲಿ’ ಎಂದು ನಿವೇದನೆ ಮಾಡಿಕೊಳ್ಳುವ ಮೂಲಕ ಕವಿ ಡಾ. ಟಿ. ಯಲಪ್ಪ ಇನ್ನೂ ಅಸ್ಪಶ್ಯತೆ ಜೀವಂತವಾಗಿರುವ ಕರಾಳತೆಯ ಮೇಲೆ ಬೆಳಕು ಚೆಲ್ಲಿದರು.
ಕವಯಿತ್ರಿ ಜ.ನಾ. ತೇಜಶ್ರೀ ಅವರು ‘ಓ ನನ್ನ ಧರ್ಮವೇ’ ಎಂಬ ಕವನ ವಾಚಿಸಿ, ಕುಣಿದು ನಲಿಯುತ್ತಿದ್ದ ಸುಂದರ ನವಿಲು ಈಗ ಮಾಂಸದಂಗಡಿಯಲ್ಲಿ ನೇತಾಡುತ್ತಿದೆ ಎಂಬ ರೂಪಕದ ಮೂಲಕ ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ, ಧರ್ಮಗಳ ನಡುವಿನ ಬಿರುಕುಗಳ ಕುರಿತು ವಿಷಾದ ಚಿತ್ರ ನೀಡಿದರು.
ಕವಯಿತ್ರಿ ಎಚ್.ಎನ್. ಅರತಿ ಅವರು ‘ಅಡುಗೆ, ಪ್ರೀತಿ, ನಿಷ್ಠೆ, ಇತ್ಯಾದಿ’ ಶೀರ್ಷಿಕೆಯ ಕವನದಲ್ಲಿ ಅಡುಗೆ ಎಂಬುದು ಮುಗಿಯದ ಯುದ್ಧ ಎಂದು ಹೇಳುವ ಮೂಲಕ ಹೆಣ್ಣಿನ ನಿತ್ಯ ಚಾಕರಿಯ ಅಸಹಾಯಕತೆ ಮತ್ತು ಪ್ರೀತಿ, ಪ್ರೇಮ, ವಂಚನೆ ಕುರಿತು ಮಾರ್ಮಿಕ ಸಾಲುಗಳನ್ನು ವಾಚಿಸಿದರು. ಮದ್ಯ ಕುರಿತ ಮತ್ತೊಂದು ಕವನದಲ್ಲಿ ’ಮದ್ಯ ತುಂಬಿರುವ ಗಾಜಿನ ಲೋಟವಷ್ಟೇ ಪಾರದರ್ಶಕ’ ಎಂದು ಹೇಳುವ ಮೂಲಕ ಮನುಷ್ಯನ ಸಂಕೀರ್ಣ ವ್ಯಕ್ತಿತ್ವದ ಚಿತ್ರವನ್ನು ಸಭಿಕರ ಮನಸ್ಸಿಗೆ ಪರಿಣಾಮಕಾರಿ ಆಗಿ ದಾಟಿಸಿದರು.
ಚಿಂತಾಮಣಿ ಕೊಡ್ಲಿಕೆರೆ ಅವರ ‘ಗರ್ಭಗುಡಿ ಸಣ್ಣದು’ ಎಂಬ ಕವನದಲ್ಲಿ ದೇವರು ಚಿನ್ನಾಭರಣ, ರೇಷ್ಮೆ ಶಲ್ಯ ಧರಿಸಿ ಗರ್ಭಗುಡಿಯಲ್ಲಿ ಬಂಧಿ ಆಗಿದ್ದಾನೆ ಎಂದು ಹೂ ಮಾರುವ ಬಾಲಕಿಯ ಬಾಯಲ್ಲಿ ಹೇಳಿಸುವ ಮೂಲಕ ಧಾರ್ಮಿಕ ವ್ಯವಸ್ಥೆಯ ಸೂಕ್ಷ್ಮ ಚಿತ್ರಣವೊಂದನ್ನು ಬಿಡಿಸಿಟ್ಟರು.
ವಾಸುದೇವ್ ನಾಡಿಗ್ ಅವರು ‘ಪದಚರಿತೆ’, ಡಾ.ಎಚ್.ಎಲ್. ಪುಷ್ಪ ಅವರ ‘ಹೀಗೊಂದು ಆಟ’, ವಸಂತಕುಮಾರ ಪೆರ್ಲ ಅವರ ‘ನಿಧಿ ಕಳ್ಳರು ಮತ್ತು ‘ಸುಪಾರಿ ಹಂತಕರು’ ಕವನಗಳು ಗಮನ ಸೆಳೆದವು. ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ಕವಿಗೋಷ್ಠಿಯನ್ನು ನಿರ್ವಹಿಸಿ ಕೊನೆಯಲ್ಲಿ ‘ಮಲ್ಲೆ ಲೋಲಿಟಾ’ ಎಂಬ ಕವನ ವಾಚಿಸಿ ಗೋಷ್ಠಿಗೆ ಮಂಗಳ ಹಾಡಿದರು.