

ಬೇಲೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಕರವೇ(ಪ್ರವೀಣ್‌ಶೆಟ್ಟಿ)ಬಣದ ಪದಾಧಿಕಾರಿಗಳು ಪಟ್ಟಣದ ವರ್ತಕರಿಗೆ ಕನ್ನಡದ ಬಾವುಟಗಳನ್ನು ವಿತರಿಸಿದರು.
ಕರವೇ (ಪ್ರವೀಣ್ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿ, ಕನ್ನಡ ನಾಡಿನ ಪ್ರತಿಯೊಬ್ಬರ ಮನೆ, ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡದ ಬಾವುಟವನ್ನು ಹಾರಿಸುವ ಮೂಲಕ 67ನೇ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ನಮ್ಮ ಅಧ್ಯಕ್ಷ ಪ್ರವೀಣ್‌ಶೆಟ್ಟಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದ ಅಂಗಡಿ -ಮುಂಗಟ್ಟುಗಳಿಗೆ ಬಾವುಟಗಳನ್ನು ಕಟ್ಟಿ ರಾಜ್ಯೋತ್ಸವ ಆಚರಿಸುವಂತೆ ತಿಳಿಸುತಿದ್ದೇವೆ ಎಂದರು.
ಪ್ರತಿಯೊಬ್ಬರು ಕನ್ನಡ ರಾಜ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸುವುದಲ್ಲದೆ ಪ್ರತಿ ಮನೆಗಳ ಮೇಲೂ ಕನ್ನಡ ಬಾವುಟ ಹಾರಾಡುವಂತೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ರಾಜೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಕನ್ನಡದ ಬಗ್ಗೆ ಮಾತನಾಡಿ, ಕನ್ನಡ ಪ್ರೀತಿಸಿದರೆ ಸಾಲದು, ಪ್ರತಿಯೊಬ್ಬರು ಕನ್ನಡವನ್ನು ಬೆಳೆಸುವುದರ ಜತೆಗೆ ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಹಳೇಬೀಡು ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಕರವೇ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್, ಯುವ ಘಟಕದ ಅಧ್ಯಕ್ಷ ರಾಕೇಶ್‌ಸಿಂಗ್, ಪದಾಧಿಕಾರಿಗಳಾದ ಕೇಬಲ್ ವಿಜಯ್‌ಕುಮಾರ್, ರಾಕೇಶ್‌ಗೌಡ, ಲೋಕೇಶ್, ಸತೀಶ್, ಹಸೇನ್, ರವಿಹೊಳ್ಳ, ಗಣೇಶ್, ಆರಾಧ್ಯ ಇತರರಿದ್ದರು.