ವರ್ತಕರಲ್ಲಿ ಭಯ ಹುಟ್ಟಿಸಿದ ರ್ಯಾಪಿಡ್ ಪರೀಕ್ಷೆ

2 vikram 2
Published on

ಧಾರವಾಡ: ಕರೊನಾಗಿಂತ ರ್ಯಾಪಿಡ್ ಪರೀಕ್ಷೆಗೆ ಹೆದರಿ ಓಡುವ ಸ್ಥಿತಿ ನಿರ್ವಣವಾಗಿದೆ! ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಿ ಕರೊನಾ ಹಾವಳಿ ತಡೆಯುವ ಉದ್ದೇಶದಿಂದ ಈ ರ್ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆ ಮಾಡಿಸಿಕೊಂಡಲ್ಲಿ ಪಾಸಿಟಿವ್ ಬರುವುದು ನಿಶ್ಚಿತ ಎಂಬ ಭಾವನೆ ಹಲವರಲ್ಲಿದೆ. ಹಾಗಾಗಿ ಪರೀಕ್ಷಾ ಪರಿಕರಗಳುಳ್ಳ ವಾಹನ ಕಂಡರೆ ಸಾಕು, ಅಲ್ಲಿಂದ ಕಾಲು ಕೀಳುತ್ತಿದ್ದಾರೆ.

ರ್ಯಾಪಿಡ್ ಪರೀಕ್ಷೆ ಪ್ರಕ್ರಿಯೆ ವ್ಯಾಪಾರಸ್ಥರ ಕಂಗೆಣ್ಣಿಗೆ ಗುರಿಯಾಗಿದೆ. ಕೆಮ್ಮು, ನೆಗಡಿ, ಜ್ವರ, ಶೀತದ ಲಕ್ಷಣಗಳಿದ್ದರೆ ತಪಾಸಣೆಗೆ ಒಳಪಡಿಸಲಿ. ಆದರೆ, ಹು-ಧಾ ನಗರದ ಮಾರುಕಟ್ಟೆಯಲ್ಲಿನ ಎಲ್ಲ ಅಂಗಡಿಗಳ ಮಾಲೀಕರು, ಸಿಬ್ಬಂದಿ ಎಲ್ಲರಿಗೂ ತಪಾಸಣೆ ಮಾಡಲಾಗುತ್ತಿದೆ. ಪೊಲೀಸರು, ಪಾಲಿಕೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಒಂದು ರೀತಿಯಲ್ಲಿ ಒತ್ತಾಯಪೂರ್ವಕ ಪರೀಕ್ಷೆ ಮಾಡುತ್ತಿದ್ದಾರೆ ಎಂದು ವ್ಯಾಪಾರಸ್ಥರು ದೂರುತ್ತಿದ್ದಾರೆ.

ಯಾವುದೇ ಲಕ್ಷಣಗಳು ಇಲ್ಲದಿದ್ದವರಲ್ಲೂ ಕರೊನಾ ದೃಢ ಪಡುವುದಿದೆ. ಅಂಥವರ ಅಂಗಡಿಯನ್ನು ಕೂಡಲೇ ಸೀಲ್​ಡೌನ್ ಮಾಡಲಾಗುತ್ತದೆ. ಅಲ್ಲಿಯೇ ಆಂಬುಲೆನ್ಸ್​ಗೆ ಹತ್ತಿಸಿಕೊಳ್ಳದೇ ಹೋಂ ಐಸೋಲೇಷನ್​ಗೆ ಸೂಚಿಸಲಾಗುತ್ತಿದೆ. ಕೆಲವರಿಗೆ ಮನೆಗೆ ಹೋಗಿ ಬರಲೂ ಬಿಡದೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯುವುದಿದೆ. ಹೀಗಾಗಿ, ವ್ಯಾಪಾರಸ್ಥರಲ್ಲಿ ಮಾತ್ರವಲ್ಲದೆ ಮಾರುಕಟ್ಟೆಗೆ ಬರುವ ಜನರಲ್ಲೂ ಭಯ ಉಂಟಾಗಿದೆ. ದಿಢೀರ್ ಪರೀಕ್ಷೆಗೆ ಹೆದರಿ ಅನೇಕ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದ ಉದಾಹರಣೆಗಳೂ ಇವೆ. ಈಗಾಗಲೇ ಅವಳಿನಗರದ 20ಕ್ಕೂ ಹೆಚ್ಚು ಅಂಗಡಿಗಳ 50ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಸೀಲ್​ಡೌನ್ ಮಾಡಿದ್ದರಿಂದ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಭೇಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದೂ ಆಗಿದೆ. ಒತ್ತಾಯಪೂರ್ವಕ ಪರೀಕ್ಷೆಯಿಂದ ಕರೊನಾ ಹಾವಳಿ ಕಡಿಮೆಯಾಗುವುದಿಲ್ಲ. ಹಾಗಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ನಮ್ಮ ಪಕ್ಕದ ಅಂಗಡಿಯವರು ಆರಾಮಾಗಿಯೇ ಇದ್ದರು. ದಿಢೀರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಆಗಿಂದಾಗ್ಗೆ ಗಾಡಿ ಹತ್ತಲು ಹೇಳಿದರು. ಅವರು ಉಟ್ಟ ಬಟ್ಟೆಯಲ್ಲೇ ತೆರಳಿದ ಮಾಹಿತಿ ತಿಳಿದು ಕುಟುಂಬದವರು ಕಂಗಾಲಾದರು. ಹೀಗೆ ಆತಂಕ ಹೆಚ್ಚಿಸದೇ ಬದಲಿ ಕ್ರಮಗಳನ್ನು ಅನುಸರಿಸಬೇಕು.| ವೈಭವ ಪಾಟೀಲ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net