ವರ್ಗಾವಣೆಯಾದ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ

17blrp1
Published on

ಬೇಲೂರು: ಮೂರು ದಶಕಕ್ಕೂ ಹೆಚ್ಚು ಕಾಲ ಒಂದೇ ಶಾಲೆಯಲ್ಲಿ ದೈಹಿಕ ಶಿಕ್ಷಕ, ಸಹ ಶಿಕ್ಷಕ ಹಾಗೂ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಜಿ.ಎಂ.ಭದ್ರೇಗೌಡ ಅವರನ್ನು ನಾಗೇನಹಳ್ಳಿ ಗ್ರಾಮದ ಹಳೇ ವಿದ್ಯಾರ್ಥಿಗಳ ಬಳಗದ ಸ್ನೇಹಿತರು ಹಾಗೂ ಗ್ರಾಮಸ್ಥರು ಸೋಮವಾರ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಬೀಳ್ಕೊಟ್ಟರು.


ಹುನುಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಆರ್.ಹರೀಶ್, ಬೇಲೂರು ತಾಲೂಕಿನ ನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1993ರಿಂದ ಇಲ್ಲಿಯ ವರೆಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಿ.ಎಂ.ಭದ್ರೇಗೌಡ ಅವರು, ಬೇರೊಂದು ಶಾಲೆಗೆ ವರ್ಗವಾಗುತ್ತಿದ್ದಾರೆ. ಅವರ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಇಂದು ಹಲವಾರು ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಎಲ್ಲರೊಂದಿಗೆ ವಿಶ್ವಾಸ ಬೆಳೆಸಿಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ. ಆದರೆ ನಮ್ಮ ಶಾಲೆಯಿಂದ ಬೇರೆ ಶಾಲೆಗೆ ವರ್ಗವಾಗಿರುವುದು ಬೇಸರದ ಸಂಗತಿಯಾದರೂ ಸರ್ಕಾರಿ ನೌಕರಿಯಾಗಿರುವುದರಿಂದ ಅದನ್ನು ಎಲ್ಲರೂ ಸ್ವೀಕರಿಸಲೇಬೇಕಿದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಜಿ.ಎಂ.ಭದ್ರೇಗೌಡ, ಈ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಲು ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರ ಪ್ರಮುಖವಾಗಿತ್ತು. ನಾನು ಸರ್ಕಾರಿ ನೌಕರನಾಗಿರುವುದರಿಂದ ಬೇರೊಂದು ಶಾಲೆಗೆ ವರ್ಗವಾಗಿದ್ದೇನೆ. ಆದರೆ ಇಲ್ಲಿನ ಗ್ರಾಮಸ್ಥರೆಲ್ಲ ಸೇರಿ ಬೀಳ್ಕೊಡುತ್ತಿರುವುದು ಸಂತೋಷ ತಂದಿದೆ ಎಂದರು.


ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದುಗೌಡ, ಕಾಫಿ ಬೆಳೆಗಾರರಾದ ಗೋಪಾಲ್, ಸುಂದರೇಶ್, ರಚಿತಾ, ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ, ಚಂದ್ರು, ಮಲ್ಲಿಕಾರ್ಜುನ, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net