ವರ್ಗಾವಣೆ ದಂಧೆ ಸುಳ್ಳು: ಸಚಿವ ಕೆ.ಎನ್. ರಾಜಣ್ಣ

K.N. Rajanna
Published on

ಹಾಸನ: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಸುಳ್ಳು ಆ ರೀತಿ ನಡೆದಿದ್ದರೆ ಯಾವುದರಲ್ಲಿ ಆಗಿದೆ ಎಂದು ನಿಖರವಾಗಿ ಹೇಳಲಿ ಎಂದು ಸಚಿವ ಕೆ.ಎನ್.ರಾಜಣ್ಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಆರೋಪ ಸುಳ್ಳು. ಜೇಬಲ್ಲಿ ಅದೇನು ತೋರಿಸಿಕೊಂಡು ಇಲ್ಲಿ ಇದೆ ಅಂತಿದ್ದರಲ್ಲಾ ಅದನ್ನು ಹೊರ ಹಾಕಲಿ, ಆಮೇಲೆ ಯಾರು ತಪ್ಪಿತಸ್ಥರು ಇರುತ್ತಾರೆ ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.

ಏನೇ ಆಪಾದನೆ ಮಾಡಿದರು ಒಂದು ಆಧಾರ ಇರಬೇಕು. ಸುಮ್ಮನೆ ಸುಳ್ಳು ಆಪಾದನೆ ಮಾಡುವುದು ಯಾರಿಗೂ ಭೂಷಣ ಅಲ್ಲಾ. ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಆಧಾರ ಇಟ್ಕಂಡು ಹೇಳಿದರೆ ಒಪ್ಪಿಕೊಳ್ಳಬಹುದು. ಅದೇನೋ ಇಟ್ಕಂಡು ಹಾವಾಡಿಗರು, ಹಾವು ಬಿಡ್ತೀನಿ ಅಂತರಲ್ಲಾ ಆ ತರಹದ ಕೆಲಸ ಮಾಡಬಾರದು ಎಂದು ಲೇವಡಿ ಮಾಡಿದರು.

ಬುಟ್ಟಿಯಲ್ಲಿ ಹಾವಿದ್ದರೆ ಅಜೆರ್ಂಟಾಗಿ ತೋರಿಸಲಿ, ಇಷ್ಟು ದಿವಸ ಏಕೆ ಕಾಯಬೇಕು. ಜೇಬಲ್ಲಿ ತೋರ್ಸಿದ್ದನ್ನು ಮೊದಲು ಆಚೆ ಬಿಡಲು ಹೇಳಿ ಆಮೇಲೆ ನೋಡೋಣ ಎಂದು ಕುಟುಕಿದರು.

ಸರ್ಕಾರ ಬದಲಾಗಿದೆ, ಅನೇಕರು ಹೊಸದಾಗಿ ಶಾಸಕರಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ನನ್ನ ಮಾತು ಕೇಳುವ ಅಧಿಕಾರಿಗಳು ಇರಬೇಕು ಅಂತ ಬಯಸುತ್ತಾರೆ, ಕೆಲ ಒತ್ತಡಗಳು ಬಂದಾಗ ಬದಲಾವಣೆಗಳು ಆಗ್ತವೆ ಎಂದ ಸಚಿವರು, ಇದು ಯಾವುದೇ ಸರ್ಕಾರದ ಮೊದಲ ವರ್ಷದಲ್ಲಿ ಆಗುವ ಪ್ರಕ್ರಿಯೆ. ಅದಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದರು.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿರುವ ಆರೋಪದ ಬಗ್ಗೆ ಮಾತನಾಡಿ, ಈ ಹಣ ಆ ಸಮುದಾಯದ ಅಬ್ಯುದಯಕ್ಕೆ ಖರ್ಚು ಮಾಡಲು ಮೀಸಲಿಟ್ಟಿರುವುದು. ವೈಯಕ್ತಿಕವಾಗಿ ಹಸು, ಮನೆ ಕಟ್ಟಿಸಿಕೊಡಬಹುದು, ವಿದ್ಯುತ್ ಸಂಪರ್ಕ ಒದಗಿಸಬಹುದು, ಇನ್ನೇನಾದರೂ ಆರ್ಥಿಕ ಚಟುವಟಿಕೆ ಮಾಡಲಿಕ್ಕೆ ಕಾರ್ಯಕ್ರಮ ರೂಪಿಸಬಹುದು. ಈ ಸಂಬಂಧ ಸಮಾಜ ಕಲ್ಯಾಣ ಸಚಿವ

ಮಹದೇವಪ್ಪ ಅವರ ಜೊತೆ ಈಗಾಗಲೇ ಮಾತನಾಡಿದ್ದೀನಿ. ಈ ಯೋಜನೆಯಡಿ ಹಣ ಇರುವುದು ಪರಿಶಿಷ್ಟ ಜಾತಿ, ಪಂಗಡದವರ ಜೀವನ ಮಟ್ಟ ಹೆಚ್ಚಿಸಲು. ಅದರಲ್ಲಿ ಇದು ಒಂದು ಸೇರಿದೆ ಅದರಲ್ಲಿ ತಪ್ಪೇನಿದೆ, ಅವರು ಮನುಷ್ಯರಲ್ಲವಾ, ಎಲ್ಲವನ್ನೂ ಕಾನೂನಿನ ಅನ್ವಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net